ರಾಜ್ಯದಲ್ಲಿ ಮೊದಲ ಹಂತದ ಮತದಾನ-ನಾಳೆ ಘಟಾನುಘಟಿಗಳ ಭವಿಷ್ಯ ನಿರ್ಧಾರ

ಬೆಂಗಳೂರು, ಏ.17- ಪ್ರಸಕ್ತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ 14 ಕ್ಷೇತ್ರಗಳಲ್ಲಿ ನಡೆಯಲಿದ್ದು, ಘಟಾನುಘಟಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ 241 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ.

ಶಾಂತಿಯುತ ಹಾಗೂ ಮುಕ್ತ ಮತದಾನಕ್ಕೆ ಚುನಾವಣಾ ಆಯೋಗ ಅಗತ್ಯ ಭದ್ರತೆ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ನಾಳೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ.

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಇಂದು ಆಯಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತಗಟ್ಟೆಗಳಿಗೆ ಮತಯಂತ್ರ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ತೆರಳುತ್ತಿದ್ದಾರೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರಗಳಾದ ಉಡುಪಿ-ಚಿಕ್ಕಮಗಳೂರು (12), ಹಾಸನ (6), ದಕ್ಷಿಣ ಕನ್ನಡ (13), ಚಿತ್ರದುರ್ಗ (19), ತುಮಕೂರು (15), ಮಂಡ್ಯ (22), ಮೈಸೂರು (22), ಚಾಮರಾಜನಗರ (10), ಬೆಂಗಳೂರು ಗ್ರಾಮಾಂತರ (15), ಬೆಂಗಳೂರು ಉತ್ತರ (31), ಬೆಂಗಳೂರು ಕೇಂದ್ರ(22), ಬೆಂಗಳೂರು ದಕ್ಷಿಣ (25), ಚಿಕ್ಕಬಳ್ಳಾಪುರ (15)ಹಾಗೂ ಕೋಲಾರ (14) ಸೇರಿದಂತೆ 241 ಮತದಾರರು ಸ್ಪರ್ಧಾ ಕಣದಲ್ಲಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ 10, ಜೆಡಿಎಸ್‍ನಿಂದ 4, ಬಿಜೆಪಿಯಿಂದ 13 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಸದಾನಂದಗೌಡ, ಸಂಸದರಾದ ಕೆ.ಎಚ್.ಮುನಿಯಪ್ಪ, ಶೋಭಾ ಕರಂದ್ಲಾಜೆ, ವೀರಪ್ಪಮೊಯ್ಲಿ, ಪಿ.ಸಿ.ಮೋಹನ್, ನಳಿನ್‍ಕುಮಾರ್ ಕಟಿಲ್, ಪ್ರತಾಪ್ ಸಿಂಹ, ಚಂದ್ರಪ್ಪ, ಧೃವನಾರಾಯಣ್, ಡಿ.ಕೆ.ಸುರೇಶ್, ಬಿ.ಕೆ.ಹರಿಪ್ರಸಾದ್, ಸಚಿವ ಕೃಷ್ಣಭೆರೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಎ.ನಾರಾಯಣಸ್ವಾಮಿ, ವಿ.ಶ್ರೀನಿವಾಸ ಪ್ರಸಾದ್, ಎ.ಮಂಜು, ಬಿ.ಎನ್.ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಹರ್ಷದ್, ಪಕ್ಷೇತರ ಅಭ್ಯರ್ಥಿಗಳಾದ ಸುಮಲತಾ, ಪ್ರಕಾಶ್ ರಾಜ್, ತೇಜಸ್ವಿ ಸೂರ್ಯ ಸೇರಿದಂತೆ ಬಿಎಸ್‍ಪಿ ಮತ್ತಿತರ ಪಕ್ಷಗಳ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಮೊದಲ ಹಂತದಲ್ಲಿ 30,164 ಮತಗಟ್ಟೆಗಳಿವೆ. 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವ ಮತಗಟ್ಟೆಗಳಲ್ಲಿ ಎರಡು ಮತಯಂತ್ರಗಳನ್ನು ಬಳಸಲಾಗುತ್ತದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 5,10,59,103 ಮತದಾರರಿದ್ದು, ಮೊದಲ ಬಾರಿ ಮತ ಚಲಾಯಿಸುವ ಹಕ್ಕು ಪಡೆದವರ ಸಂಖ್ಯೆ 10,09,167.
ಮೊದಲ ಹಂತದ 14 ಕ್ಷೇತ್ರಗಳಲ್ಲಿ 2,67,51,893 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

ಪರ್ಯಾಯ ಗುರುತಿನ ದಾಖಲೆಗಳು: ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯ. ಮತದಾರರ ಪಟ್ಟಿಯಲ್ಲಿ ಹೆಸರುಳ್ಳ ಅರ್ಹ ಮತದಾರರು ಭಾರತದ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿಯಲ್ಲದೆ ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ, ರಾಜ್ಯ, ಪಿಎಸ್‍ಯು, ಪಬ್ಲಿಕ್ ಲಿಮಿಟೆಡ್ ಕಂಪೆನಿಗಳ ಭಾವಚಿತ್ರವಿರುವ ಗುರುತಿನ ಚೀಟಿ, ಪೋಸ್ಟ್ ಆಫೀಸ್, ಬ್ಯಾಂಕ್‍ಗಳ ಪಾಸ್‍ಬುಕ್‍ಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದು.

ಅದೇ ರೀತಿ ಪಾನ್‍ಕಾರ್ಡ್, ಆರ್‍ಜಿಐ, ಎನ್‍ಪಿಆರ್ ಮೂಲಕ ನೀಡಿರುವ ಸ್ಮಾರ್ಟ್‍ಕಾರ್ಡ್, ಉದ್ಯೋಗ ಖಾತ್ರಿಯ ಗುರುತಿನ ಚೀಟಿ, ಕಾರ್ಮಿಕ ಇಲಾಖೆಯ ಆರೋಗ್ಯ ವಿಮಾ, ಆಧಾರ್ ಕಾರ್ಡ್, ಭಾವಚಿತ್ರವಿರುವ ಪೆನ್ಷನ್ ಕಾರ್ಡ್, ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ ಸೇರಿದಂತೆ 11 ವಿಧದ ಗುರುತಿನ ಚೀಟಿಗಳ ಪೈಕಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.

ಈಗಾಗಲೇ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರಿಗೆ ವೋಟರ್ ಸ್ಲಿಪ್‍ಗಳನ್ನು ನೀಡಲಾಗಿದೆ.

ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಿದ್ದು, ದಿವ್ಯಾಂಗರಿಗೆ ರ್ಯಾಂಪ್‍ಗಳು, ಭೂತಕನ್ನಡಿ, ಕುಡಿಯುವ ನೀರು, ಗಾಲಿ ಕುರ್ಚಿ, ಸಾರಿಗೆ ವ್ಯವಸ್ಥೆ ಮೊದಲಾದ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ