ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸೈನಿಕರ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಮತ ಕೇಳಲು ಪುಲ್ವಾಮಾ ದಾಳಿ ಪ್ರಕರಣವನ್ನು ಮುಂದಿಡುತ್ತಿದೆ. ಪ್ರಧಾನಿ ಮೋದಿ ಏನು ಗನ್ ಹಿಡಿದುಕೊಂಡು ಹೋಗಿದ್ದರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಭಕ್ತಿ ಹೆಸರಲ್ಲಿ ಮಹಾತ್ಮಾ ಗಾಂಧಿಯನ್ನ ಕೊಂದಿದ್ದೇ ಬಿಜೆಪಿ ಸಾಧನೆ. ಬಿಜೆಪಿ ಅವರು ದೇಶ ಭಕ್ತಿ ಹೆಸರಲ್ಲಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನೀವು ಚಲಾಯಿಸುವ ಮತ ಸೇನೆಗೆ ನೀಡಿದಂತೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಟಾಂಗ್ ನೀಡಿದ ಸಿದ್ದರಾಮಯ್ಯ ಅವರು, ಕಳೆದ 16 ಸಾರ್ವತ್ರಿಕ ಚುನಾವಣೆಯಲ್ಲಿ ಸೈನ್ಯ ಇರಲಿಲ್ಲವೆ? ಜೈ ಜವಾನ್ ಜೈ ಕಿಸಾನ್ ಎಂದು ಹೇಳಿದವರು ಯಾರು? ದೇಶ ಭಕ್ತಿಯ ಪಾಠವನ್ನು ಬಿಜೆಪಿಯವರಿಂದ ಕಲಿಯುವ ಅಗತ್ಯವಿಲ್ಲ ಎಂದರು.
ಎಲ್ಲಾ ರಂಗಗಳಲ್ಲೂ ವಿಫಲವಾಗಿರುವ ಬಿಜೆಪಿ ಸರ್ಕಾರ ಇದೀಗ ಭಾವನಾತ್ಮಕ ವಿಚಾರಗಳನ್ನು ಮುಂದಿಡುತ್ತಿದೆ. ಪುಲ್ವಾಮಾ ದಾಳಿ ಪ್ರಕರಣವನ್ನು ಮುಂದಿಟ್ಟು ಮತಯಾಚನೆ ಮಾಡುತ್ತಿದೆ. ಹಾಗಾದ್ರೆ ಪ್ರಧಾನಿ ಮೋದಿಯೇನು ಗನ್ ಹಿಡಿದುಕೊಂಡು ಹೋಗಿದ್ದರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದೇ ವೇಳೆ ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ತಿಪ್ಪರಲಾಗಾ ಹಾಕಿದರೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
PM Narendra Modi,Vote,soldiers name,siddaramaiah