ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿಗೆ ಚುನಾವಣಾ ಪ್ರಚಾರಕ್ಕೆ ನಿಷೇಧ

ನವದೆಹಲಿ: ನೀತಿ ಸಂಹಿತೆ ಉಲ್ಲಂಘಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮೂರು ದಿನ ಹಾಗೂ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಎರಡು ದಿನ ಚುನಾವಣಾ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ಆದೇಶಿಸಿದೆ.

ಯೋಗಿ ಆದಿತ್ಯನಾಥ್ ಅವರಿಗೆ ನಾಳೆ ಬೆಳಗ್ಗೆ 6 ಗಂಟೆಯಿಂದ 72 ಗಂಟೆಗಳ ಕಾಲ ಹಾಗೂ ಮಾಯಾವತಿ ಅವರಿಗೆ 48 ಗಂಟೆಗಳ ಕಾಲ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಅಲ್ಲದೆ ಈ ಇಬ್ಬರು ನಾಯಕರ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಲಾಗಿದೆ.

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ರಾಜಕೀಯ ನಾಯಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಕ್ರಮ ಕೈಗೊಂಡಿದೆ.

ಮಂಗಳವಾರ ಬೆಳಗ್ಗೆ 6ಗಂಟೆಯಿಂದ ಮುಂದಿನ 72ಗಂಟೆಗಳ ಕಾಲ ಯೋಗಿ ಆದಿತ್ಯನಾಥ್ ಯಾವುದೇ ಸಾರ್ವಜನಿಕ ಸಭೆಯನ್ನಾಗಲಿ ಅಥವಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಬಾರದು. ಅದೇ ರೀತಿ ಮಾಯಾವತಿಗೂ ಕೂಡಾ 48ಗಂಟೆಗಳ ಕಾಲ ನಿರ್ಬಂಧ ವಿಧಿಸಿರುವುದಾಗಿ ಆಯೋಗ ತಿಳಿಸಿದೆ.

ಏಪ್ರಿಲ್ 11ರಂದು ಯೋಗಿ ಆದಿತ್ಯನಾಥ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಬಾರಿಯ ಲೋಕಸಭಾ ಚುನಾವಣೆ ಅಲಿ ಹಾಗೂ ಬಜರಂಗಿ ಬಲಿ ನಡುವಿನ ಹೋರಾಟ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಯೋಗಿ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು.

ಇನ್ನು ಮಾಯಾವತಿ ಅವರು. ಈ ಲೋಕಸಭಾ ಚುನಾವಣೆಯಲ್ಲಿ ಒಂದು ನಿಗದಿತ ಪಕ್ಷಕ್ಕೆ ಮುಸ್ಲಿಮರು ಮತ ಚಲಾಯಿಸಬಾರದು ಎಂದು ದಿಯೋಬಂದ್ ಗೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದ್ದರು. ಇದಕ್ಕೆ ವಿವರಣೆ ಕೇಳಿ ಆಯೋಗ ನೋಟಿಸ್ ಜಾರಿ ಮಾಡಿತ್ತು.

Yogi Adityanath, Mayawati Punished For Poll Code Violation

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ