ಬೆಂಗಳೂರು: ಮಂಡ್ಯದ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಇಲ್ಲಿನ ಚುನಾವಣಾ ಕಣದಲ್ಲಿ ಹಲವು ಮಂದಿಯಿದ್ದರೂ ಜಿದ್ದಾಜಿದ್ದಿ ಸ್ಪರ್ಧೆ ಮಾತ್ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಮತ್ತು ಬಿಜೆಪಿ ಬೆಂಬಲಿ ಅಭ್ಯರ್ಥಿ ಸುಮಲತಾರ ನಡುವೆ ಎಂಬುದು ಬಹಿರಂಗ ಸತ್ಯ. ಉಭಯ ಅಭ್ಯರ್ಥಿಗಳು ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದರೂ ಈ ಬಾರಿ ಗೆಲುವು ಯಾರಿಗೆ ಎಂಬ ಭಯ ಎಲ್ಲರಲ್ಲೂ ಶುರುವಾಗಿದೆ. ಮೇಲ್ನೋಟಕ್ಕೆ ಗೆಲುವು ನಮ್ಮದೇ ಎಂದು ಭಾಸವಾಗುತ್ತಿದ್ದರೂ ಒಳಗೊಳಗೆ ಏನೋ ಒಂದು ತರದ ಆಂತಕ ಕಾಡುತ್ತಿದೆ.
ಅದರಲ್ಲೂ ಈ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೀಡು ಬಿಟ್ಟು ಪುತ್ರನ ಗೆಲುವಿಗಾಗಿ ಹಲವು ತಂತ್ರಗಾರಿಕೆಗಳನ್ನು ಹೆಣೆಯುತ್ತಿದ್ದಾರೆ. ಅತ್ತ ಸುಮಲತಾ ಅಂಬರೀಶ್ ಅವರು ಕೂಡಾ ಪ್ರತಿ ತಂತ್ರ ರೂಪಿಸುತ್ತಿದ್ದಾರೆ. ಇದರ ಭಾಗವಾಗಿಯೇ ಇಂದು ಬೆಳಗ್ಗೆ 8.30ಕ್ಕೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಸುಮಲತಾ ಮಾಲಾರ್ಪಣೆ ಮಾಡಿದ್ದಾರೆ.
ಹಾಗೆಯೇ ಮಸೀದಿ, ಚರ್ಚ್ ಎನ್ನದೇ ಭೇಟಿ ನೀಡಿ ಅಬ್ಬರದ ಪ್ರಚಾರ ನಡೆಸುತ್ತಿದ್ಧಾರೆ.
ಇನ್ನು ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳು ನಡೆಸುತ್ತಿರುವ ಪ್ರಚಾರ ಸಭೆಗಳಿಗೆ ಸಾರ್ವಜನಿಕರು ಬಹುತೇಕ ಒಂದೇ ರೀತಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿಯೇ ಮತದಾರರ ಮನದಾಳದಲ್ಲಿ ಯಾರಿದ್ದಾರೆ ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ. ಹಳ್ಳಿಗಳಿಗೆ ಹೋದ ಕಡೆಯಲ್ಲಾ ಎರಡು ಅಭ್ಯರ್ಥಿಗಳ ಪರ ಜನರು ಸೇರುತ್ತಿದ್ದಾರೆ. ಇದು ಕೂಡಾ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಗೆಲುವು ತಮ್ಮದೇ ಎನ್ನುತ್ತಿದ್ದರೂ ಒಳಗೊಳಗೆ ಮತದಾರ ಪ್ರಭುವಿನ ನಿರ್ಣಯದ ಕುರಿತು ಭೀತಿ ಶುರುವಾಗಿದೆ ಎಂದರೇ ತಪ್ಪಾಗಲಿಕ್ಕಿಲ್ಲ.
ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಮೈತ್ರಿ ಅಭ್ಯರ್ಥಿ ನಿಖಿಲ್ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾರು ಇಂದು ಮುಖಾಮುಖಿ ಎದುರಾಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸುಮಲತಾ ಅವರೇ ನಿಖಿಲ್ಗೆ ಎದುರಾಗಬಾರದು ಎಂಬ ಕಾರಣಕ್ಕೆ ತಮ್ಮ ಪ್ರಚಾರದ ಸಮಯವನ್ನು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ 8.30ಕ್ಕೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮವಿತ್ತು. ಆದರೆ ಇದೇ ಸಮಯಕ್ಕೆ ನಿಖಿಲ್ ಕೂಡ ಕಾರ್ಯಕ್ರಮ ನಿಗದಿಪಡಿಸಿಕೊಂಡಿದ್ದರು. ಮಾಲಾರ್ಪಣೆ ಬಳಿಕ ಮಂಡ್ಯ ಚರ್ಚ್ ಗೆ ಹಾಗೂ ಮಳವಳ್ಳಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ನಿಖಿಲ್ ಮತ್ತು ಸುಮಲತಾ ನಿಗದಿ ಪಡಿಸಿಕೊಂಡಿದ್ದರು. ಈ ಮೂಲಕ ಇಬ್ಬರು ಎದರು-ಬದುರು ಆಗಬೇಕಿತ್ತು.
ಆದರೀಗ ಸುಮಲತಾ ತಮ್ಮ ಸಮಯವನ್ನು ಬದಲಾಯಿಸಿಕೊಂಡಿದ್ದಾರೆ. ಮೊದಲು ಚರ್ಚ್ ಗೆ ಭೇಟಿ ನೀಡಿ ನಂತರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ನಂತರ ಮಳವಳ್ಳಿ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬುದಾಗಿ ಆಪ್ತ ವಲಯದಿಂದ ಮಾಹಿತಿ ಲಭಿಸಿದೆ. ಇನ್ನೊಂದೆಡೆ ಸುಮಲತಾ ಪರವಾಗಿ ಮಂಡ್ಯ ನಗರದಲ್ಲಿ ದರ್ಶನ್, ಕೆ.ಆರ್ ಪೇಟೆ ತಾಲೂಕಿನಲ್ಲಿ ಯಶ್ ಕೂಡ ಮತಯಾಚನೆ ಮುಂದುವರಿಸಿದ್ಧಾರೆ ಎಂದು ತಿಳಿದು ಬಂದಿದೆ.