ಕಾಂಗ್ರೆಸ್​ ಹೈಕಮಾಂಡ್​ಗೆ ಹೊಸ ತಲೆನೋವು; ಮೈತ್ರಿ ಪಕ್ಷದ ನಾಯಕರ ವಿರುದ್ಧ ತಿರುಗಿಬಿದ್ದ ಮಂಡ್ಯದ ಕೈ​ ಕಾರ್ಯಕರ್ತರು

ಮಂಡ್ಯಮಂಡ್ಯದ ರಾಜಕೀಯ ಚದುರಂಗದಾಟ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದ್ದು, ಅಖಾಡದಿಂದ ದೂರ ಉಳಿದಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಹಾಗೂ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆನ್ನಿಗೆ ನಿಂತಿವೆ.

ಸದ್ಯಕ್ಕೆ ಈ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ಅಭ್ಯರ್ಥಿಗಳ ವರ್ಚಸ್ಸು ಹೆಚ್ಚು ಮುಖ್ಯವಾಗಿದ್ದು, ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಬಗ್ಗೆ ಮಂಡ್ಯದ ಕಾಂಗ್ರೆಸ್​ ಕಾರ್ಯಕರ್ತರು ಆರಂಭದಲ್ಲೇ ಅಸಮಾಧಾನ ಹೊರಹಾಕಿದ್ದರು. ಇದೀಗ, ಕಾಂಗ್ರೆಸ್​ನ ಮಾಜಿ ಸಚಿವ ಅಂಬರೀಶ್​ ಅವರ ಪತ್ನಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಜಿಲ್ಲೆಯ ಕಾಂಗ್ರೆಸ್​ ಕಾರ್ಯಕರ್ತರು ಆಕೆಗೆ ಬೆಂಬಲ ನೀಡಿ, ಕಾಂಗ್ರೆಸ್​ ಬಾವುಟ ಹಿಡಿದು ಪ್ರಚಾರದಲ್ಲಿ ಸಾಥ್​ ನೀಡುತ್ತಿದ್ದಾರೆ.

ಇದರಿಂದಾಗಿ ಕಾಂಗ್ರೆಸ್​ ನಾಯಕರಿಗೆ ತೀವ್ರ ಮುಜುಗರ ಉಂಟಾಗಿತ್ತು. ಸುಮಲತಾಗೆ ಕಾಂಗ್ರೆಸ್​ ನಾಯಕರು ಕೂಡ ಬೆಂಬಲ ನೀಡುತ್ತಿದ್ದಾರೆ ಎಂದು ಜೆಡಿಎಸ್​ ನಾಯಕರು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್​ ನಾಯಕರ ಜೊತೆಗೆ ಸಭೆ ನಡೆಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ನೀವು ಸುಮಲತಾಗೆ ಬೆಂಬಲ ನೀಡಿದ ಮಾತ್ರಕ್ಕೆ ಆಕೆ ಗೆದ್ದಮೇಲೆ ಕಾಂಗ್ರೆಸ್​ಗೆ ಬೆಂಬಲ ನೀಡುತ್ತಾರೆಂದು ಭಾವಿಸಿದ್ದೀರಾ? ಈಗಾಗಲೇ ಆಕೆಗೆ ಬಿಜೆಪಿ ಬೆಂಬಲ ನೀಡಿರುವುದರಿಂದ ಆ ರೀತಿಯ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿರುವಾಗ ನೀವು ಸುಮಲತಾಗೆ ಬೆಂಬಲ ನೀಡಿದರೆ ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಮೈತ್ರಿ ಧರ್ಮವನ್ನು ಮುರಿದಂತಾಗುತ್ತದೆ. ಹಾಗಾಗಿ, ನಿಖಿಲ್ ಪರ ಪ್ರಚಾರ ಮಾಡಿ ಎಂದು ಸೂಚನೆ ನೀಡಿದ್ದರು.

ಹಾಗೇ, ನಿನ್ನೆ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಕೂಡ, ಪಕ್ಷೇತರ ಅಭ್ಯರ್ಥಿ ಪರ ಕಾಂಗ್ರೆಸ್​ ಬಾವುಟ ಹಿಡಿದು ಪ್ರಚಾರ ಮಾಡುವ ಕಾರ್ಯಕರ್ತರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಅಂಥವರು ಪಕ್ಷ ಬಿಟ್ಟು ಹೋಗಬಹುದು. ಬೇರೆ ಪಕ್ಷದ ಅಭ್ಯರ್ಥಿ ಜೊತೆಗೆ ನಮ್ಮ ಪಕ್ಷದ ಚಿಹ್ನೆ ಕಾಣಿಸಿಕೊಳ್ಳಬಾರದು. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ ಎಂದು ಖಡಕ್​ ಸೂಚನೆ ನೀಡಿದ್ದರು.

ಸಿಡಿದೆದ್ದ ಕಾಂಗ್ರೆಸ್ಕಾರ್ಯಕರ್ತರು:

ಆದರೆ, ಇದಾವುದಕ್ಕೂ ಬಗ್ಗದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ನಾಯಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಸುಮಲತಾ ಪರ ಕಾಂಗ್ರೆಸ್ ಬಾವುಟ ಹಾರಿಸಬಾರದು ಎಂಬ ಎಚ್ಚರಿಕೆ ನೀಡಿದ ಪಕ್ಷದ ಅಧ್ಯಕ್ಷರಿಗೆ ತಿರುಗೇಟು ನೀಡಲು ನಿರ್ಧರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಇಂದು ಬಹಿರಂಗವಾಗಿಯೇ ಬಾವುಟ ಹಿಡಿದು ಸುಮಾ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ.

ಇಂದು ನಾಗಮಂಗಲದಲ್ಲಿ ಸುಮಲತಾ ಪರ ಪ್ರಚಾರ ನಡೆಸಲಿರುವ ಟನ ದರ್ಶನ್ ಜೊತೆ ಕಾಂಗ್ರೆಸ್ ಬಾವುಟ ಹಿಡಿದು ಪ್ರಚಾರ ಮಾಡಲು ಸ್ಥಳೀಯ ಕಾರ್ಯಕರ್ತರು ನಿರ್ಧರಿಸಿದ್ದಾರೆ. ನಮ್ಮ ವಿರುದ್ಧ ಕ್ರಮಕ್ಕೆ ಮುಂದಾದರೆ ಪಕ್ಷ ತೊರೆಯುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ಸ್ಥಳೀಯ ಕಾಂಗ್ರೆಸ್​ ನಾಯಕರು ಸಭೆ ನಡೆಸಿದ್ದು, ಮಂಡ್ಯದಲ್ಲಿ ಜೆಡಿಎಸ್​- ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ನಿಖಿಲ್​ ವಿರುದ್ಧ ನಿಂತಿದ್ದಾರೆ. ಚುನಾವಣೆ ವೇಳೆ ಮಂಡ್ಯದ ಕಾಂಗ್ರೆಸ್​ ಕಾರ್ಯಕರ್ತರು ಅಸಹಕಾರ ತೋರಿಸುತ್ತಿರುವುದು ಕಾಂಗ್ರೆಸ್​ ಹೈಕಮಾಂಡ್​ಗೂ ತಲೆನೋವಾಗಿ ಪರಿಣಮಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ