ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು, ಏ.12- ನಾವು ಆಪರೇಷನ್ ಕಮಲ ನಡೆಸದಿದ್ದರೂ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ 5 ವರ್ಷಗಳ ಆಡಳಿತವನ್ನು ಪೂರ್ಣಗೊಳಿಸುವುದಿಲ್ಲ ಎಂದು ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.

ದೋಸ್ತಿ ಪಕ್ಷಗಳು ಎಷ್ಟರಮಟ್ಟಿಗೆ ಒಂದಾಗಿವೆ ಎಂಬುದು ಲೋಕಸಭಾ ಚುನಾವಣೆಯಲ್ಲೇ ಜಗಜ್ಜಾಹೀರಾಗಿದೆ. ಹಾವು ಮುಂಗುಸಿಯಂತಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ವಿಧಾನಸೌಧದಲ್ಲಿ ಮಾತ್ರ ದೋಸ್ತಿಯಾಗಿದ್ದರೂ ಹಾದಿಬೀದಿಯಲ್ಲಿ ಈಗಲೂ ಜಂಗೀಕುಸ್ತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರು ಪ್ರೆಸ್‍ಕ್ಲಬ್ ಹಾಗೂ ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ನೀವು ಆಪರೇಷನ್ ಕಮಲ ನಡೆಸುತ್ತೀರ ಎಂಬ ಮಾಧ್ಯಮದವರ ಪ್ರಶ್ನೆಗೆ ಸ್ವಯಂಕೃತ ಅಪರಾಧದಿಂದಲೇ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಆಪರೇಷನ್ ಕಮಲ ನಡೆಸುತ್ತದೆ ಎಂಬುದು ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಆರೋಪ. ಕಾಂಗ್ರೆಸ್‍ನಲ್ಲಿರುವ ಅನೇಕ ಶಾಸಕರೇ ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿಯುವುದನ್ನು ಎದುರು ನೋಡುತ್ತಿದ್ದಾರೆ.ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ನಮ್ಮ ಪಕ್ಷದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.

ಮೇ.23ರ ತನಕ ಕಾಯಬೇಕಾದ ಅಗತ್ಯವೇ ಇಲ್ಲ. ಸರ್ಕಾರ ಅಷ್ಟರೊಳಗೆ ಬಿದ್ದರೂ ಬೀಳಬಹುದು.ಅದಕ್ಕೆ ಆಪರೇಷನ್ ಕಮಲದ ಅಗತ್ಯವೇ ಇಲ್ಲ. ಕೆಲವೇ ದಿನಗಳವರೆಗೂ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸಾರಥ್ಯವನ್ನು ಯಾರಿಗೆ ನೀಡಬೇಕು ಎಂಬುದು ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ. ಸದ್ಯಕ್ಕೆ ಯಡಿಯೂರಪ್ಪನವರು ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ನಮ್ಮ ಪಕ್ಷದ ಸಂವಿಧಾನದಲ್ಲಿ ಒಬ್ಬರಿಗೆ ಮೂರು ವರ್ಷಗಳ ಕಾಲ ಅವಕಾಶವಿದೆ. ಆದರೆ ಈ ಬಾರಿ ಹೊಸ ಬೈಲಾ ಪ್ರಕಾರ ಎರಡು ಅವಧಿಗೆ ಮಾತ್ರ ಅವಕಾಶವಿದೆ. ಯುವಕರಿಗೆ ಆದ್ಯತೆ ನೀಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಹೈಕಮಾಂಡ್ ನಾಯಕರು ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ.ಚುನಾವಣೆ ಮುಗಿದ ಬಳಿಕ ರಾಜ್ಯಾಧ್ಯಕ್ಷರ ಹುದ್ದೆ ಬದಲಾಗಬಹುದು ಇಲ್ಲವೇ ಹಾಲಿ ಅಧ್ಯಕ್ಷರೇ ಮುಂದುವರೆಯಬಹುದು ಎಂದು ಹೇಳಿದರು.

ಬಿ.ಎಲ್.ಸಂತೋಷ್ ಅವರ ಹೇಳಿಕೆ ಕುರಿತಂತೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ತಿಳಿಯದು.ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ದೇಶವೇ ಪ್ರಥಮ ಎಂಬುದು ನಮ್ಮ ಕಲ್ಪನೆ. ಇದನ್ನೇ ನಮ್ಮ ಪ್ರಣಾಳಿಕೆಯಲ್ಲೂ ಸೇರ್ಪಡೆ ಮಾಡಿದ್ದೇವೆ. ದೇಶ ಮೊದಲು ಆಮೇಲೆ ನಾವು.ಇದು 130 ಕೋಟಿ ಜನರ ಆಶಯವೂ ಹೌದು ಎಂದರು.

ಇದೇ ವೇಳೆ ಸದಾನಂದಗೌಡ ತಮ್ಮ ಮಾತಿನಲ್ಲಿ ಐದು ವರ್ಷಗಳ ಕಾಲ ಸಂಸದರಾಗಿ ಮಾಡಿರುವ ಸಾಧನೆಯನ್ನು ಮೆಲುಕು ಹಾಕಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ