ಜಂಟಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಮಾಜಿ ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು, ಏ.12-ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿ ಜೆಡಿಎಸ್-ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿರುವ ಜಂಟಿ ಸಮಾವೇಶದಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ನಾಳೆ ರಾಹುಲ್‍ಗಾಂಧಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಅವರು, ತಮ್ಮದೇ ಕ್ಷೇತ್ರವಾಗಿರುವ ನಾಗಮಂಗಲದಲ್ಲಿಂದು ನಡೆಯುತ್ತಿರುವ ಜೆಡಿಎಸ್-ಕಾಂಗ್ರೆಸ್ ಜಂಟಿ ಸಮಾವೇಶದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಚೆಲುವರಾಯಸ್ವಾಮಿ ಅವರ ಮನವೊಲಿಸಲು ಹಲವು ರೀತಿಯ ಪ್ರಯತ್ನ ನಡೆಸಿದರೂ ಅದು ಪ್ರಯೋಜನವಾಗಿಲ್ಲ.

ಜೆಡಿಎಸ್ ನಾಯಕರು ಕಾಂಗ್ರೆಸಿಗರ ಬಗ್ಗೆ ತುಂಬಾ ಹಗುರವಾಗಿ ಮಾತನಾಡುತ್ತಾರೆ.ಮೈತ್ರಿ ಧರ್ಮ ಪಾಲನೆ ಮಾಡುವುದಿಲ್ಲ. ಹೀಗಾಗಿ ನಾನು ಜೆಡಿಎಸ್ ನಾಯಕರ ಜತೆ ನನ್ನ ಕ್ಷೇತ್ರದಲ್ಲಿ ವೇದಿಕೆ ಹಂಚಿಕೊಳ್ಳುವುದಿಲ್ಲ. ನಾನು ವೇದಿಕೆ ಹಂಚಿಕೊಂಡರೆ ತಳಮಟ್ಟದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ.ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತದೆ ಎಂದು ಚೆಲುವರಾಯಸ್ವಾಮಿ ವಾದಿಸಿದ್ದಾರೆ.

ಸಿದ್ದರಾಮಯ್ಯ ಅವರು ಇದು ರಾಹುಲ್‍ಗಾಂಧಿ ಅವರ ಸೂಚನೆ. ಎಲ್ಲರೂ ಮೈತ್ರಿ ಧರ್ಮ ಪಾಲಿಸಲೇಬೇಕು.ನೀವು ನಿಮ್ಮ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೈರು ಹಾಜರಾದರೆ ತಪ್ಪು ಸಂದೇಶ ರವಾನೆಯಾಗುತ್ತದೆ.ಭಿನ್ನಾಭಿಪ್ರಾಯಗಳೇನೇ ಇದ್ದರೂ ಅದನ್ನು ಚುನಾವಣೆ ನಂತರ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳೋಣ.ಈಗ ಹಠ ಮಾಡದೆ ಸಮಾವೇಶಕ್ಕೆ ಬನ್ನಿ ಎಂದು ಸಲಹೆ ನೀಡಿದ್ದಾರೆ.

ಆದರೆ, ಅದಕ್ಕೆ ಚೆಲುವರಾಯಸ್ವಾಮಿ ಒಪ್ಪದೆ ನಿರಾಕರಿಸಿದ್ದು, ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಕೆ.ಆರ್.ನಗರದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಬೇಕಾದರೆ ಬರುತ್ತೇನೆ. ನಾಗಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ನೀವು ಹೋಗಿ ಬನ್ನಿ ಎಂದು ಬೀಳ್ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅವರು ಎಚ್‍ಎಎಲ್‍ಗೆ ತೆರಳಿ ಅಲ್ಲಿಂದ ಹೆಲಿಕಾಫ್ಟರ್‍ನಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲಕ್ಕೆ ಪ್ರಯಾಣ ಬೆಳೆಸಿದರು.ಚೆಲುವರಾಯಸ್ವಾಮಿ ಅವರು ಸಿದ್ದರಾಮಯ್ಯ ಅವರ ಮನೆಯಿಂದ ತಮ್ಮ ಕಾರಿನಲ್ಲಿ ರಹಸ್ಯ ಸ್ಥಳಕ್ಕೆ ತೆರಳಿದರು.

ನಿನ್ನೆ ಮಳವಳ್ಳಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಸ್ಥಳೀಯ ಜೆಡಿಎಸ್‍ನ ಶಾಸಕ ಕೆ.ಅನ್ನದಾನಿ ಅವರು ಜಂಟಿ ಪ್ರಚಾರ ನಡೆಸಿ ಮೈತ್ರಿ ಅಭ್ಯರ್ಥಿ ನಿಖಿಲ್‍ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡಿದ್ದರು.

ಈ ಸಂದರ್ಭದಲ್ಲೂ ಸಹ ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಗೈರು ಹಾಜರಾಗಿದ್ದರು. ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್‍ನ ಎಲ್ಲಾ ನಾಯಕರು ಮೈತ್ರಿ ಧರ್ಮ ಪಾಲಿಸಲೇಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅದಕ್ಕೆ ನರೇಂದ್ರ ಸ್ವಾಮಿ ಸೊಪ್ಪು ಹಾಕಿಲ್ಲ.

ಇಂದು ಸಿದ್ದರಾಮಯ್ಯ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ನಾಗಮಂಗಲ, ಮಳವಳ್ಳಿ ಮತ್ತಿತರ ಕಡೆ ಚುನಾವಣಾ ಪ್ರಚಾರ ನಡೆಸಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಸಿದ್ದರಾಮಯ್ಯ ಅವರ ಮಂಡ್ಯ ಭೇಟಿ ವೇಳೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಗೈರು ಹಾಜರಾಗುತ್ತಿರುವುದು ದೋಸ್ತಿಗಳ ನಡುವಿನ ಅಸಮಾಧಾನದ ತೀವ್ರತೆಗೆ ಸಾಕ್ಷಿಯಾಗಿದೆ.

ನಾಳೆ ರಾಹುಲ್‍ಗಾಂಧಿ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಎಷ್ಟು ಮಂದಿ ಕಾಂಗ್ರೆಸ್ ನಾಯಕರು ಭಾಗವಹಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ