ಮತದಾರರನ್ನು ಓಲೈಸಲು ರಾಷ್ಟ್ರೀಯ ಪಕ್ಷಗಳ ನಾಯಕರುಗಳ ಆಗಮನ

ಬೆಂಗಳೂರು,ಏ.12- ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆ ಮತದಾರರನ್ನು ಓಲೈಸಲು ರಾಷ್ಟ್ರೀಯ ಪಕ್ಷಗಳ ಘಟಾನುಘಟಿ ನಾಯಕರು ಕರ್ನಾಟಕಕ್ಕೆ ದಾಂಗುಡಿ ಇಡಲಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪರ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಮತ್ತು ಬೆಂಗಳೂರಿನಲ್ಲಿ ಪ್ರಚಾರ ನಡೆಸಿದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಕೋಲಾರ, ಚಿತ್ರದುರ್ಗ ಮತ್ತು ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಮತಯಾಚನೆ ಮಾಡುವರು.

ಈ ಇಬ್ಬರು ನಾಯಕರು ಏಕಕಾಲಕ್ಕೆ ಕರುನಾಡಿಗೆ ಆಗಮಿಸುತ್ತಿರುವುದರಿಂದ ಬೇಸಿಗೆಯ ಕಾವು ಹೆಚ್ಚಾದಂತೆ ಲೋಕಸಮರದ ಬಿಸಿಯೂ ಕ್ಷಣಕ್ಷಣಕ್ಕೂ ಏರತೊಡಗಿದೆ.

ಇನ್ನು ಮುಂದಿನ ವಾರ ನರೇಂದ್ರ ಮೋದಿ ಉತ್ತರ ಕರ್ನಾಟಕ ಭಾಗದಲ್ಲಿ ಅಬ್ಬರಿಸಿದರೆ, ಬಿಜೆಪಿಯ ಫೈರ್ ಬ್ರಾಂಡ್ ಖ್ಯಾತಿಯ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ರಾಜನಾಥ್‍ಸಿಂಗ್, ಸ್ಮೃತಿ ಇರಾನಿ ಸೇರಿದಂತೆ ಮತ್ತಿತರ ಪ್ರಮುಖರು ಬಿಜೆಪಿ ಪರ ಪ್ರಚಾರ ನಡೆಸಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರ ಮನವೊಲಿಸಲಿದ್ದಾರೆ.

ಕರಾವಳಿಯಲ್ಲಿ ಅಬ್ಬರ:
ಈಗಾಗಲೇ ಕೋಟೆನಾಡು ಚಿತ್ರದುರ್ಗ ಮತ್ತು ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿ ಅಬ್ಬರಿಸಿದ್ದ ಮೋದಿ ನಾಳೆ ಬಿಜೆಪಿಯ ಭದ್ರಕೋಟೆ ಹಾಗೂ ಆರ್‍ಎಸ್‍ಎಸ್‍ನ ಪ್ರಯೋಗಾಲಯ ಎಂದೇ ಕರೆಯುವ ದಕ್ಷಿಣ ಕನ್ನಡದಲ್ಲಿ ಪ್ರಚಾರ ನಡೆಸುವರು.

ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಮೋದಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳುವರು.

ಕರಾವಳಿ ಜಿಲ್ಲೆಯ ಮೂರು ಭಾಗಗಳಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ, ಮೋದಿ ಅವರ ಮೂಲಕ ಪ್ರಚಾರ ನಡೆಸಿ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದೆ.

ಇಲ್ಲಿನ ಮಂಗಳ ಕ್ರೀಡಾಂಗಣದಲ್ಲಿ ಮಧ್ಯಾಹ್ನ ಬೃಹತ್ ಸಾರ್ವಜನಿಕ ಸಭೆ ನಡೆಯಲಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಕರೆತರಲು ಬಿಜೆಪಿ ಸಜ್ಜಾಗಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಈ ಭಾಗದಲ್ಲಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರಿಂದ ಬಿಜೆಪಿ ಭರ್ಜರಿ ಗೆಲ್ಲುವು ಸಾಧಿಸಿತ್ತು.

ಮಂಗಳೂರು ಸಮಾವೇಶದ ನಂತರ ಮೋದಿ ನೇರವಾಗಿ ಬೆಂಗಳೂರಿಗೆ ಆಗಮಿಸುವರು.ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸುವರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.

ಸಮಾವೇಶವನ್ನು ಯಶಸ್ವಿಯಾಗಿ ನೆರವೇರಿಸಲು ಬಿಜೆಪಿ ನಾಯಕರು ಕಳೆದ ಒಂದು ವಾರದಿಂದ ನಿರಂತರವಾಗಿ ಸಭೆಗಳನ್ನು ನಡೆಸಿದ್ದಾರೆ.ಮೋದಿ ಬೆಂಗಳೂರಿನಲ್ಲಿ ಪ್ರಚಾರ ನಡೆಸುವುದರಿಂದ ಪಕ್ಷಕ್ಕೆ ಹೆಚ್ಚಿನ ಲಾಭವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕಮಲ ಪಾಳೆಯದಲ್ಲಿ ಕೇಳಿಬರುತ್ತಿವೆ.

ಕಾಂಗ್ರೆಸ್ ಪರ ರಾಹುಲ್ ಪ್ರಚಾರ:

ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಪರ ನಾಳೆ ಬಹಿರಂಗ ಸಮಾವೇಶ ಹಾಗೂ ರೋಡ್ ಶೋ ಮೂಲಕ ಮತಯಾಚಿಸಲಿದ್ದಾರೆ.

ಮೊದಲು ಕೋಲಾರಕ್ಕೆ ತೆರಳಲಿರುವ ಅವರು ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಪರ ಬಹಿರಂಗ ಸಮಾವೇಶ ನಡೆಸಲಿದ್ದಾರೆ.

ಸಂಸದರಾದ ಕೆ.ಎಚ್.ಮುನಿಯಪ್ಪ ಮತ್ತು ವೀರಪ್ಪ ಮೊಯ್ಲಿ ಪರ ಪ್ರಚಾರ ಮಾಡುವ ಅವರು ಕೋಲಾರದಿಂದ ಕೋಟೆನಾಡು ಚಿತ್ರದುರ್ಗಕ್ಕೆ ರಾಹುಲ್ ಲಗ್ಗೆ ಇಡಲಿದ್ದಾರೆ.

ಚಿತ್ರದುರ್ಗದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರ ಪ್ರಚಾರ ನಡೆಸುವರು. ಸುಮಾರು ಒಂದು ಲಕ್ಷ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.

ಕೋಲಾರದ ನಂತರ ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ.

ಹೀಗೆ ನಾಳೆ ಏಕಕಾಲಕ್ಕೆ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಆಗಮಿಸುತ್ತಿರುವುದರಿಂದ ಏಟಿಗೆ ಎದಿರೇಟು, ಆರೋಪ-ಪ್ರತ್ಯಾರೋಪ ಸುರಿಮಳೆಯೇ ಆಗಲಿದೆ.

ಉತ್ತರ ಕರ್ನಾಟಕಕ್ಕೆ ಲಗ್ಗೆ:
ಇದೇ 23ರಂದು 2ನೇ ಹಂತದ ಮತದಾನ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.ಶಿವಮೊಗ್ಗ, ದಾವಣಗೆರೆ, ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಒಟ್ಟು 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಜರುಗುವುದು.

ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಯೋಗಿ ಆದಿತ್ಯನಾಥ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ದೇವೇಂದ್ರ ಫಡ್ನವೀಸ್, ಶಿವರಾಜ್ ಸಿಂಗ ಚವ್ಹಾಣ್, ರಾಜನಾಥ್ ಸಿಂಗ್ ಸೇರಿದಂತೆ ಕಾಂಗ್ರೆಸ್-ಬಿಜೆಪಿಯ ಘಟಾನುಘಟಿ ನಾಯಕರು ಉತ್ತರ ಕರ್ನಾಟಕದಲ್ಲಿ ಅಬ್ಬರಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ