ನಾಗಮಂಗಲ,ಏ.12- ಮಾಜಿ ಸಚಿವ ಚೆಲುವರಾಯಸ್ವಾಮಿ ಎಲ್ಲೇ ಇದ್ದರೂ ನಮ್ಮವರೇ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆದ ಮೇಲೆ ಎರಡು ಪಕ್ಷಗಳ ಮುಖಂಡರು ಖುದ್ದಾಗಿ ಪ್ರಚಾರದಲ್ಲಿ ಭಾಗವಹಿಸಬೇಕು. ನಮ್ಮನ್ನು ಕರೆಯಲಿಲ್ಲ ಎಂದು ಕಾದು ಕುಳಿತುಕೊಳ್ಳಬಾರದು ಎಂದು ಸಂಸದ ಹಾಗೂ ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಂಡ್ಯಕ್ಕೆ ಆಗಮಿಸಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದ ಮೇಲೆ ಉಳಿದ ನಾಯಕರು ಕೂಡ ಬರಲೇಬೇಕು.
ಚೆಲುವರಾಯಸ್ವಾಮಿ ಎಲ್ಲೇ ಇದ್ದರೂ, ಏನೇ ಕೆಲಸವಿದ್ದರೂ ಅದನ್ನು ಬಿಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈವರೆಗೂ ಚೆಲುವರಾಯಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಅವರನ್ನು ವಿರೋಧಿಸಿಲ್ಲ. ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಮಾಡಿಲ್ಲ. ಪರ-ವಿರೋಧ ಏನೂ ಮಾಡದೆ ತಮ್ಮ ಪಾಡಿಗೆ ತಾವಿದ್ದಾರೆ.
ಒಂದು ವೇಳೆ ಅವರು ಸಮಾವೇಶಕ್ಕೆ ಬರುವುದಾದರೆ ನಾವು ರೆಡ್ಕಾರ್ಫೆಟ್ ಹಾಕಿ ಸ್ವಾಗತಿಸುತ್ತೇವೆ ಎಂದು ಶಿವರಾಮೇಗೌಡ ಹೇಳಿದರು.
ಜಂಟಿ ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ಚೆಲುವರಾಯಸ್ವಾಮಿ ಅವರ ಹೆಸರನ್ನೂ ಹಾಕಲಾಗಿದೆ. ಅವರ ಪೋಟೋಗಳನ್ನು ಯಾವ ಬ್ಯಾನರ್ನಲ್ಲೂ ತೆಗೆಸಿಲ್ಲ ಎಂದು ಸ್ಪಷ್ಟಪಡಿಸಿದರು.