ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಿ ನನ್ನ ಹೋರಾಟಕ್ಕೆ ಸ್ಪೂರ್ತಿ ತುಂಬಬೇಕು-ಮಾಜಿ ಪ್ರಧಾನಿ ದೇವೇಗೌಡ

ನಾಗಮಂಗಲ,ಏ.12- ಇಳಿವಯಸ್ಸಿನಲ್ಲಿ ನಾನು ನನ್ನ ಜನರ ಹಿತಾಸಕ್ತಿಗಾಗಿ ಕಾವೇರಿ ವಿಷಯ ಕುರಿತಂತೆ ಪ್ರತಿ ಹಂತದಲ್ಲೂ ಹೋರಾಟ ಮಾಡಿದ್ದೇನೆ. ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿ ಮುಂದೆಯೂ ನನ್ನ ಹೋರಾಟಕ್ಕೆ ಸ್ಫೂರ್ತಿ ತುಂಬಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಂಡ್ಯ ಜನರಲ್ಲಿ ಮನವಿ ಮಾಡಿದರು.

ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಪರವಾಗಿ ಮೊದಲ ಬಾರಿಗೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ನಾಗಮಂಗಲದಲ್ಲಿ ವೇದಿಕೆ ಹಂಚಿಕೊಂಡರು.

ತಮ್ಮ ಭಾಷಣದುದ್ದಕ್ಕೂ ಕಾವೇರಿ ಹೋರಾಟದ ಪ್ರತಿ ಹಂತವನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಅವರು ಒಂದು ಹಂತದಲ್ಲಿ ಭಾವೋದ್ವೇಗಕ್ಕೊಳಗಾಗಿ ಕಣ್ಣೀರು ಹಾಕಿದರು.

ಕಾವೇರಿ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ನ್ಯಾಯಸಮ್ಮತವಾಗಿದೆ ಎಂದು ನಿರ್ಣಯಕ್ಕೆ ಬಂದು ಅದರ ಅಧಿಸೂಚನೆ ಹೊರಡಿಸಲು ಪ್ರಯತ್ನ ನಡೆದಿತ್ತು. 2007ರಲ್ಲಿ ನಾನು ಈ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿ ತೀರ್ಪಿನ ಲೋಪದೋಷದ ಬಗ್ಗೆ ಗಮನಸೆಳೆದಿದ್ದಲ್ಲದೆ ಖಾಸಗಿ ವ್ಯಕ್ತಿಗಳಿಂದ ವಿಶೇಷ ಮೇಲ್ಮನವಿ ಸಲ್ಲಿಸಲು ಸಹಕಾರ ನೀಡಿದೆ. ಆದರೆ ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನನಗೆ ಸಹಕಾರ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾಲ್ಕು ವಾರಗಳಲ್ಲಿ ಕಾವೇರಿ ನದಿ ನೀರು ಪ್ರಾಧಿಕಾರ ಮತ್ತು ನಿರ್ವಹಣಾ ಮಂಡಳಿ ರಚನೆಯಾಗಬೇಕೆಂದು ಸುಪ್ರೀಂಕೋರ್ಟ್ ಸೂಚನೆ ನೀಡಿದಾಗ , ಕೇಂದ್ರ ಸರ್ಕಾರ ಮಂಡಳಿ ರಚನೆಗೆ ಸಿದ್ಧ ಎಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಇದನ್ನು ವಿರೋಧಿಸಿ ನಾನು ಅನಾರೋಗ್ಯವನ್ನು ಲೆಕ್ಕಿಸದೆ ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದೆ. ಆಗ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಿ ಸಂಸತ್‍ನಲ್ಲಿ ಚರ್ಚೆ ಮಾಡದ ಹೊರತು ಮಂಡಳಿ ರಚನೆ ಮಾಡುವುದಿಲ್ಲ ಎಂದು ಹೇಳಿತ್ತು.

ಪ್ರತಿ ಹಂತದಲ್ಲೂ ಕಾವೇರಿಗಾಗಿ ಹೋರಾಟ ಮಾಡಿದ್ದೇನೆ. ನನ್ನ ದೇಹದಲ್ಲಿ ಜೀವ ಇರುವವರೆಗೂ ನನ್ನ ಜನರಿಗಾಗಿ ಹೋರಾಟ ಮುಂದುವರೆಸುತ್ತೇನೆ, ಇಲ್ಲಿ ನಿಖಿಲ್ ದೇವೇಗೌಡರ ಮೊಮ್ಮಗ ಎಂಬುದು ಪ್ರಶ್ನೆಯಲ್ಲ. ನಾನು ಮತ್ತು ಸಿದ್ದರಾಮಯ್ಯನವರು ಒಟ್ಟಾಗಿ ನಿಮ್ಮ ಮುಂದೆ ಬಂದಿದ್ದೇವೆ. ಸಿದ್ದರಾಮಯ್ಯನವರ ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಹಲವಾರು ಜನಪರ ಯೋಜನೆಗಳನ್ನು ನೀಡಿದ್ದಾರೆ ಎಂದು ಹೊಗಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಗೆ ಮತ ಹಾಕಿ ಎಂದು ಹೇಳಿದ್ದಾರೆ. ಮುಸ್ಲಿಂಬಾಂಧವರು ಇದನ್ನು ಯೋಚಿಸಬೇಕು.

ಗೋದ್ರಾದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಶಿವರಾಮೇಗೌಡರನ್ನು 48 ಸಾವಿರ ಮತಗಳ ಅಂತರದಿಂದ ಈ ಹಿಂದೆ ಗೆಲ್ಲಿಸಿದ್ದೀರಾ, ಈಗ ನಿಖಿಲ್‍ನನ್ನು ಅದಕ್ಕಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸಿ ನನ್ನ ಮುಂದಿನ ಹೋರಾಟಕ್ಕೆ ಸಹಕಾರ ನೀಡಿ ಎಂದರು.

ಕುಡಿಯುವ ನೀರಿಗೂ ನಾವು ಭಿಕ್ಷೆ ಬೇಡಬೇಕಾಗಿದೆ ಕಾವೇರಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯ ತಡೆಯಬೇಕಿದೆ. ಮೇಕೆದಾಟಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ.

ನಾನು ಚುನಾವಣೆಯಲ್ಲಿ ನಿಲ್ಲಬಾರದು ಎಂದು ನಿರ್ಧರಿಸಿದ್ದೆ. ಅನ್ಯಾಯಗಳ ವಿರುದ್ದ ಹೋರಾಟ ಮಾಡಲು ನಿಮ್ಮಂಥ ಹಿರಿಯರು ಬೇಕೆ ಬೇಕು ಎಂದು ಒತ್ತಡ ಹೇರಿದ್ದರಿಂದ ಕಾಂಗ್ರೆಸಿಗರ ಸಲಹೆ ಮೇರೆಗೆ ತುಮಕೂರಿನಲ್ಲಿ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ