ನಾಳೆ ಕೋಲಾರ ನಗರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ

ಕೋಲಾರ,ಏ.12- ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ನಾಳೆ (ಏ.13) ನಗರಕ್ಕೆ ಆಗಮಿಸಿ ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ.

ನಗರದ ಆಲ್ ಅಮೀನ್ ಕಾಲೇಜು ಆವರಣದಲ್ಲಿ ನವೀಕರಿಸಿರುವ ಹೆಲಿಪ್ಯಾಡ್‍ಗೆ ಆಗಮಿಸಿ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪನವರ ಪರ ಪ್ರಚಾರ ಭಾಷಣ ಮಾಡಲಿದ್ದಾರೆ.

ರಾಹುಲ್‍ಗಾಂಧಿ ಬರುವ ನಿಮಿತ್ತ ಬಂದೋಬಸ್ತ್ ವ್ಯವಸ್ಥೆ ಸರ್ಕಾರಿ ನಿಯಮಗಳಂತೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸಪಟ್ ತಿಳಿಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದ್ದು, ರಾಜಧಾನಿ ಬೆಂಗಳೂರಿಗೆ ಬಂದು ನಂತರ ಹೆಲಿಕಾಫ್ಟರ್‍ನಲ್ಲಿ ಕೋಲಾರಕ್ಕೆ ಬರಲಿದ್ದಾರೆ.

ಕ್ರೀಡಾಂಗಣದಲ್ಲಿ ನಿರ್ಮಿಸಿರುವು ಎರಡು ದ್ವಾರಗಳ ಮೂಲಕ ಸಾರ್ವಜನಿಕರ ಪ್ರವೇಶವಿದ್ದು, ಆಗಮಿಸುವ ಪ್ರತಿ ಮಹಿಳೆ, ಪುರುಷರನ್ನು ತಪಾಸಣೆಗೆ ಒಳಪಡಿಸಲಾಗುವುದು. ಕ್ರೀಡಾಂಗಣಕ್ಕೆ ಬರುವವರು ಮೊಬೈಲ್ ಪೋನ್, ಮಾದಕ ವಸ್ತುಗಳು, ಬೆಂಕಿಪೊಟ್ಟಣ, ಸಿಗರೇಟು, ತಂಬಾಕು ಪದಾರ್ಥಗಳು, ಯಾವುದೇ ಆಯುಧ ಲಗೇಜ್, ನೀರಿನ ಬಾಟಲ್ ತರುವುದನ್ನು ನಿಷೇಧಿಸಲಾಗಿದೆ.

ಬಂದೋಬಸ್ತ್ ವ್ಯವಸ್ಥೆಗಾಗಿ ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೆಜಿಎಫ್ ಜಿಲ್ಲೆಗಳಿಂದ ನಾಲ್ಕು ಜನ ಎಸ್‍ಪಿಗಳು, ಹೆಚ್ಚುವರಿ ಎಸ್‍ಪಿಗಳು, 150 ಅಧಿಕಾರಿಗಳು, ಸಾವಿರಕ್ಕೂ ಹೆಚ್ಚು ಹೆಡ್‍ಕಾನ್‍ಸ್ಟೇಬಲ್ ಮತ್ತು ಪಿಸಿಗಳು ಇದ್ದು, ಇದಲ್ಲದೆ ಜಿಲ್ಲಾ ಸಶಸ್ತ್ರದಳ, ಕೆಎಸ್‍ಆರ್‍ಪಿ ತುಕಡಿಗಳು ಬಂದೋಬಸ್ತ್ ವ್ಯವಸ್ಥೆಯಲ್ಲಿರುತ್ತವೆ ಎಂದು ರಕ್ಷಣಾಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ