ಪ್ರಣಾಳಿಕೆ ಬಿಡುಗಡೆ ಮಾಡಿದ ಬೆಂಗಳೂರು ಕೇಂದ್ರ ಪಕ್ಷೇತರ ಅಭ್ಯರ್ಥಿ ಪ್ರಕಾಶ್‍ರಾಜ್

ಬೆಂಗಳೂರು, ಏ.12- ಹಸಿರು ಹಾಗೂ ಚೊಕ್ಕ ಬೆಂಗಳೂರು ಮತ್ತು ಆರೋಗ್ಯವಂತ ಬೆಂಗಳೂರು ಮಾಡಲು ಬದ್ಧನಿರುವುದಾಗಿ ಘೋಷಿಸಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್‍ರಾಜ್ ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಪತ್ರಕರ್ತರ ಭವನದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು ಎಲ್ಲರಿಗೂ ಸಮಾನ ಶಿಕ್ಷಣ, ಕೊಳಚೆ ನಿವಾಸಿಗಳಿಗೆ ಕೌಶಲ್ಯಾಭಿವೃದ್ಧಿ, ಕ್ರೀಡೆ, ಕಲೆ, ಸಂಸ್ಕøತಿಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದ್ದಾರೆ.

ಈಗಿರುವ ಸಾರಿಗೆ ಸಂಪರ್ಕ ಜಾಲವನ್ನು ಮೇಲ್ದರ್ಗೆಗೇರಿಸಿ ಗುಣಮಟ್ಟ ಹೆಚ್ಚಿಸಲು ಬೇಕಿರುವ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ನಗರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಜೆಟ್ ಮೀಸಲಿಡಲಾಗುವುದು.

ಉದ್ಯಾನವನ ಅಥವಾ ಇತರೆಡೆ ನಾಗರಿಕ ಸಮಿತಿ ಒಪ್ಪಿಗೆ ಇಲ್ಲದೆ ಮರಗಳನ್ನು ಕತ್ತರಿಸುವುದನ್ನು ಸಂಪೂರ್ಣವಾಗಿ ತಡೆಯುವ ಪ್ರಯತ್ನ ಮಾಡಲಾಗುವುದು, ಹೆಸರಿಗೆ ತಕ್ಕಂತೆ ಉದ್ಯಾನನಗರಿಯಾಗಿಸಲು ಮುಂದಡಿ, ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ ಕನಿಷ್ಠ 20 ಸಾವಿರ ಲೀಟರ್ ಉಚಿತ ನೀರು ಪೂರೈಕೆಗೆ ಒತ್ತು, ಮಹಿಳೆಯರು ಸೇರಿದಂತೆ ಎಲ್ಲ ಬಗೆಯ ಕೆಳಸ್ಥರಕ್ಕೆ ತಳ್ಳಲ್ಪಟ್ಟ ಸಮುದಾಯಗಳಿಗೆ ಸಮಾನ ಅವಕಾಶ ನೀಡಿ ಸಾಮಾಜಿಕ ನ್ಯಾಯಪಾಲನೆ ಮಾಡಲಾಗುವುದು. ಎಲ್ಲಕ್ಕಿಂತ ಮಿಗಿಲಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ.

ಸರ್ವರಿಗೂ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆ ಸಾರ್ವಜನಿಕ ಕ್ಷೇತ್ರದಲ್ಲಿ ರೂಪುಗೊಳ್ಳಲು ಬೇಕಾದ ಯೋಜನೆಗಳನ್ನು ಜ್ಟಾರಿಗೆ ತರುವುದಾಗಿ ತಿಳಿಸಿದ್ದಾರೆ.

10 ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿರುವ ಎಲ್ಲರಿಗೂ ಕೈಗೆಟಕುವ ದರದ ವಸತಿ ವ್ಯವಸ್ಥೆ ಮಾಡಲು ವಿಶೇಷ ಯೋಜನೆ ತರುವುದಾಗಿ ಪ್ರಕಾಶ್‍ರಾಜ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.

ಕರ್ನಾಟಕ ಜನಶಕ್ತಿ, ಸ್ವರಾಜ್ ಇಂಡಿಯಾ, ರೈತ ಸಂಘ, ಹಮ್ ಆದ್ಮಿ ಪಕ್ಷ, ಸಿಪಿಐ, ಎಸ್‍ಯುಸಿಐ ಮತ್ತಿತರ ಸಂಘಟನೆಗಳು ಪ್ರಕಾಶ್‍ರಾಜ್ ಅವರಿಗೆ ಬೆಂಬಲ ನೀಡಿದ್ದು, ಮುಖಂಡರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ