ಬೆಂಗಳೂರು, ಏ.12-ನಗರದಲ್ಲಿ ಹಾಡಹಗಲೇ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಸರ ಅಪಹರಣ ಪ್ರಕರಣಗಳು ನಡೆಯುತ್ತಲೇ ಇದ್ದು, ನಿನ್ನೆ ಮೂವರು ಮಹಿಳೆಯರ ಸರಗಳನ್ನು ಚೋರರು ಎಗರಿಸಿದ್ದಾರೆ.
ಕಾಮಾಕ್ಷಿಪಾಳ್ಯ: ಸುಂಕದಕಟ್ಟೆಯ ನಮ್ಮೂರ ಸರ್ಕಾರಿ ಶಾಲೆ ಸಮೀಪ ನಿನ್ನೆ ಮಧ್ಯಾಹ್ನ 1.30ರ ಸಮಯದಲ್ಲಿ ಪ್ರೇಮಾ ಎಂಬುವರು ನಡೆದು ಹೋಗುತ್ತಿದ್ದಾಗ ಬೈಕ್ನಲ್ಲಿ ಹಿಂಬಾಲಿಸಿದ ಸರಗಳ್ಳ ಇವರ ಕೊರಳಲ್ಲಿದ್ದ 50 ಗ್ರಾಂ ಮಾಂಗಲ್ಯ ಸರ ಎಗರಿಸಿಕೊಂಡು ಪರಾರಿಯಾಗಿದ್ದಾನೆ. ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ.
ಸಿದ್ಧಾಪುರ: ನಿನ್ನೆ ಬೆಳಗ್ಗೆ 8.45ರಲ್ಲಿ ಶ್ರೀಮತಿ ಶ್ರೀವತ್ಸ ಎಂಬುವರು ಲಾಲ್ಬಾಗ್ ಒಳಗೆ ಇರುವ ಕೆರೆ ಬಳಿ ವಾಯುವಿಹಾರ ಮಾಡುತ್ತಿದ್ದಾಗ ಸರಗಳ್ಳ ಸಮಯ ಸಾಧಿಸಿ 45 ಗ್ರಾಂ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾನೆ.
ತಲಘಟ್ಟಪುರ: ನಾರಾಯಣಪ್ಪ ಗ್ರೀನ್ಗಾರ್ಡನ್ 4ನೇ ಎಚ್ ಬ್ಲಾಕ್, ಬಿಎಸ್ಕೆ 6ನೇ ಹಂತದ ರಸ್ತೆಯಲ್ಲಿ ಚೈತ್ರಾ ಎಂಬುವರು ನಿನ್ನೆ ಬೆಳಗ್ಗೆ 6 ಗಂಟೆಯಲ್ಲಿ ನಡೆದು ಹೋಗುತ್ತಿದ್ದರು.
ಈ ವೇಳೆ ನಾಲ್ವರು ದರೋಡೆಕೋರರು ಇವರನ್ನು ಹಿಂಬಾಲಿಸಿಕೊಂಡು ಬಂದು ಚಾಕು ತೋರಿಸಿ ಬೆದರಿಸಿ, ಅವರ ಕೊರಳಲ್ಲಿದ್ದ 18 ಗ್ರಾಂ ಸರವನ್ನು ಕಳಚಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ಮೂರು ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಸರಗಳ್ಳರಿಗಾಗಿ ತನಿಖೆ ಕೈಗೊಂಡಿದ್ದಾರೆ.