ಮಾತಿಗೆ ನಾನು ಬದ್ಧನಾಗಿದ್ದೇನೆ; ಶಾಂತಿಗೆ ಒಂದು ಅವಕಾಶ ನೀಡಿ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ನಾನು ಪ್ರಧಾನಿಯಾದಾಗ ನರೇಂದ್ರ ಮೋದಿ ಅವರಿಗೆ ಮಾತು ಕೊಟ್ಟಿದ್ದೆ. ಬಡತನ ಮತ್ತು ಅನಕ್ಷರಸ್ಥತೆಯ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು. ಆ ಮಾತಿಗೆ ನಾನು ಬದ್ಧನಾಗಿದ್ದೇನೆ. ಶಾಂತಿಗೆ ಒಂದು ಅವಕಾಶ ನೀಡಿ. ಪುಲ್ವಾಮಾ ದಾಳಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.

ಪುಲ್ವಾಮಾ ಉಗ್ರರ ದಾಳಿ ಬಗ್ಗೆ ಭಾರತ ಕ್ರಿಯಾಶೀಲ ಗುಪ್ತಚರ ಒದಗಿಸಿದರೆ ಪಾಕಿಸ್ತಾನ ತಕ್ಷಣವೇ ಅದಕ್ಕೆ ಪ್ರತಿಕ್ರಿಯೆ ನೀಡಲಿದೆ. ತಮ್ಮ ಮಾತಿಗೆ ಬದ್ಧನಾಗಿದ್ದು ಶಾಂತಿ ನೆಲೆಸಲು ಅವಕಾಶ ನೀಡಬೇಕೆಂದು ಇಮ್ರಾನ್ ಖಾನ್ ಪುನರುಚ್ಛರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜಸ್ತಾನದಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡುತ್ತ, ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿಯಾದ ನಂತರ ತಾವು ದೂರವಾಣಿ ಕರೆ ಮಾಡಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಂದರ್ಭದಲ್ಲಿ ಬಡತನ ಮತ್ತು ಅನಕ್ಷರತೆ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದು ಹೇಳಿದ್ದಾಗ ನಾನು ಪಠಾಣ್ ಮಗ ಎಂದು ಇಮ್ರಾನ್ ಹೇಳಿದ್ದರು, ಪಠಾಣ್ ಎಂದರೆ ಇರಾನಿನ ಒಂದು ಜನಾಂಗ. ಇವರು ಪ್ರಾಮಾಣಿಕತೆ ಮತ್ತು ಸತ್ಯಕ್ಕೆ ಹೆಸರಾದವರು. ಆದರೆ ಇಂದು ಅವರು ತಮ್ಮ ಮಾತಿನ ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದು ಮೋದಿ ಟೀಕಿಸಿದ್ದರು.

ಈ ಹಿನ್ನಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಸಚಿವಾಲಯ ಹೇಳಿಕೆ ಹೊರಡಿಸಿದ್ದು ಅದರಲ್ಲಿ, ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಮಾತಿಗೆ ಬದ್ಧವಾಗಿದ್ದು ಭಾರತ ನಮಗೆ ಕ್ರಿಯಾಶೀಲ ಗುಪ್ತಚರ ಮಾಹಿತಿ ಕೊಟ್ಟರೆ ನಾವು ತಕ್ಷಣವೇ ಕಾರ್ಯಪ್ರವೃತ್ತವಾಗುತ್ತೇವೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಶಾಂತಿಗೆ ಒಂದು ಅವಕಾಶ ಕೊಡಿ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

pakistan PM,imran khan,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ