ಬೀದರ್: ಭಾಲ್ಕಿ ತಾಲೂಕಿನಲ್ಲಿ 50 ವರ್ಷಗಳಿಂದ ಅಧಿಕಾರದಲ್ಲಿರುವ ಖಂಡ್ರೆ ಕುಟುಂಬ ಜಾತಿ-ಜಾತಿ, ಮನೆ-ಮನೆಗಳಲ್ಲಿ ಜಗಳ ಹಚ್ಚಿ, ಹಣ ಹೆಂಡದ ಹೊಳೆ ಹರಿಸಿ ಚುನಾವಣೆಯಲ್ಲಿ ಜಯಗಳಿಸುತ್ತಾ ಬಂದಿದ್ದಾರೆ. ಈಗ ನನ್ನ ಮುಂದೆ ಹಣದ ಆಟ ನಡೆಯದು ಎಂದು ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಆರೋಪಿಸಿದರು.
ತಾಲೂಕಿನ ಲಾಧಾ, ಮೇಹಕರ್ ಮತ್ತು ಭಾತಂಬ್ರಾ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿ ಮಾತನಾಡಿ, ಜಿಲ್ಲೆಯ ಜನರಿಗೆ ಸುಳ್ಳು ಹೇಳುವುದು, ಮೋಸ ಮಾಡುವುದು ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಕಾಯಕ ಮಾಡಿಕೊಂಡಿದ್ದಾರೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಆಟ ನಡೆಯದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಮಾಡಿರುವ ರಸ್ತೆ ಅಭಿವೃದ್ಧಿ ಕಾರ್ಯಗಳು ಈಶ್ವರ ಖಂಡ್ರೆ ಅವರಿಗೆ ಕಾಣಿಸುತ್ತಿಲ್ಲವೇ ? ಅಥವಾ ಗೊತ್ತಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ ಖೂಬಾ, ಈಶ್ವರ ಖಂಡ್ರೆ ಈಗಲಾದರೂ ಜನರಿಗೆ ಸುಳ್ಳು ಹೇಳುವುದನ್ನು ಬಿಡಬೇಕು ಎಂದರು.
ಮುಖಂಡ ಡಿ.ಕೆ.ಸಿದ್ರಾಮ ಮಾತನಾಡಿ, ಈಶ್ವರ ಖಂಡ್ರೆಗೆ ಹಣದ ಮದ ಏರಿದೆ. ಆರು ತಿಂಗಳ ಹಿಂದೆ ಕ್ಷೇತ್ರದ ಮತದಾರರು ಖಂಡ್ರೆಗೆ ಶಾಸಕರನ್ನಾಗಿ ಮಾಡಿದರು.
ಜನರ ತೀರ್ಪಿನ ವಿರುದ್ಧ ಈಗ ಲೋಕಸಭೆಗೆ ನಿಂತಿದ್ದಾರೆ. ಚುನಾವಣೆ ನಿಲ್ಲುವ ಮುಂಚೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಖಾಡಕ್ಕೆ ಬನ್ನಿ. ಖಂಡ್ರೆ ಅಧಿಕಾರದ ಹಪಾಹಪಿಗೆ ಒಳಗಾಗಿದ್ದಾರೆ ಎಂದರು.
ಶಿವರಾಜ ಗಂದಗೆ, ದತ್ತಾತ್ರಿ ತೂಗಾಂವಕರ್, ಸೂರಜಸಿಂಗ್, ದಿಗಂಬರರಾವ ಮಾನಕಾರಿ, ರಾಮರಾವ ಬಿರಾದಾರ, ಪ್ರತಾಪ ಪಾಟೀಲ್, ಸುರೇಶ ಬಿರಾದಾರ, ರಾವಸಾಬ್ ಬಿರಾದಾರ, ಬಸವರಾಜ ಹೊನ್ನಾ, ಶಿವರಾಜ ತೋರಣೆ, ಶಾಂತವೀರ ಕೇಸ್ಕರ್, ಶರದ ದುರ್ಗಾಳೆ, ನವನಾಥ ಪಾಟೀಲ್, ಸಂತೋಷ ಪಾಟೀಲ್, ಸತೀಶ್ ಚಾಂದಿವಾಲೆ, ಗಣೆಶ ಪಾಟೀಲ್, ಜಗದೀಶ್ ಬಿರಾದಾರ, ಬಾಬುರಾವ ಮದಕಟ್ಟಿ, ಸಂಗಮೇಶ ಭೂರೆ ಇತರರಿದ್ದರು.
—————