ತುಮಕೂರು, ಏ.9-ಜಿಲ್ಲೆಗೆ ನನ್ನ ಕೊಡುಗೆ ಏನು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಪದೇ ಪದೇ ಬೊಬ್ಬೆ ಹೊಡೆಯುತ್ತಿದ್ದಾರೆ. ಬಹಿರಂಗ ಚರ್ಚೆಗೆ ಬರಲಿ ನನ್ನ ಕೊಡುಗೆ ಏನು ಎಂಬುದನ್ನು ದಾಖಲೆ ಸಮೇತ ತೋರಿಸುತ್ತೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜ್ ಟಾಂಗ್ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಿಂದ ನಾಲ್ಕು ಬಾರಿ ಸಂಸದನಾಗಿ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಗೆ ಮಾಡಿದ್ದೇನೆ. ಆದರೆ ನಿಮ್ಮ ಕೊಡುಗೆ ಏನು ಎಂದು ಪದೇ ಪದೇ ಕೇಳುತ್ತಿದ್ದಾರೆ. ಅಭಿವೃದ್ಧಿಯ ಬಗ್ಗೆ ಬಹಿರಂಗ ಚರ್ಚೆ ಏರ್ಪಡಿಸಲಿ ಅಲ್ಲಿ ಯಾರ್ಯಾರು ಎಷ್ಟೆಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ನನ್ನ ಕಾರ್ಯಗಳೆಷ್ಟು ಎಂಬುದು ತಿಳಿಯುತ್ತದೆ ಎಂದು ಸವಾಲು ಹಾಕಿದರು.
ನಮ್ಮದು ಇಂಜಿನಿಯರಿಂಗ್ ಕಾಲೇಜಿದೆ ಎಂದು ಹೇಳುತ್ತಾರಲ್ಲ, ಅಕ್ರಮವಾಗಿ ನಾವು ಯಾವುದೇ ಕಾಲೇಜು ನಿರ್ಮಾಣ ಮಾಡಿಲ್ಲ. ಕಳೆದ ಮೂರ್ನಾಲ್ಕು ವರ್ಷದಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ.ಯಾವುದೇ ಡೊನೇಷನ್ ಪಡೆದಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಂದ ಹಿತದೃಷ್ಟಿಯಿಂದ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದರು.
ನೀವೇನು ಮಾಡಿದ್ದೀರಿ ಜನರನ್ನು ಕುಡಿಸಿ, ಕುಡಿಸಿ ಹಾಳು ಮಾಡುತ್ತಿದ್ದೀರ ಎಂದು ಸಚಿವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಉಪಮುಖ್ಯಮಂತ್ರಿಗಳಿಗೆ ನೀರಾವರಿ ಯೋಜನೆಗಳ ಬಗ್ಗೆ ವ್ಯಾಕರಣವೇ ಗೊತ್ತಿಲ್ಲ.ನೇತ್ರಾವತಿ, ಎತ್ತಿನಹೊಳೆ, ಕುಮಾರಧಾರ, ಭದ್ರಾ ಯೋಜನೆ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳಿಗೆ.ಇವುಗಳ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ನನ್ನ ಟೀಕಿಸುವುದೇ ಅವರಿಗೆ ಕೆಲಸವಾಗಿ ಹೋಗಿದೆ. ಎತ್ತಿನ ಹೊಳೆ ಒಳಸುಳಿ , ತೆರೆದ ಕಾಲುವೆ, ಊರಿಗೊಂದು ಕೆರೆ, ಆ ಕೆರೆ ನದಿ ನೀರು, ಫುಡ್ಪಾರ್ಕ್, ಎಚ್ಎಎಲ್ ಘಟಕ, ಜಿ.ಎಸ್. ಪರಮಶಿವಯ್ಯ ಅಧ್ಯಯನ ಕೇಂದ್ರ ಸೇರಿದಂತೆ ಒಟ್ಟು 55 ಅಭಿವೃದ್ಧಿ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ. ಇದರಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನೂ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಿದೆ. ನನ್ನ ಯೋಜನೆ ಬಗ್ಗೆ ನಾನು ಹೇಳುತ್ತಿದ್ದೇನೆ. ನಿಮ್ಮ ಯೋಜನೆಗಳ ಬಗ್ಗೆ ನೀವೇ ಹೇಳಿ.ಬಹಿರಂಗ ಚರ್ಚೆಗೆ ನಾನು ಸದಾ ಸಿದ್ಧ ಎಂದು ಮೈತ್ರಿ ಪಕ್ಷಕ್ಕೆ ಟಾಂಗ್ ನೀಡಿದರು.
ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ನನ್ನ ಸಲಹೆಗಳನ್ನು ರಾಜ್ಯಸರ್ಕಾರ ಅಡ್ಡಿಪಡಿಸದೆ ಸಮರ್ಪಕವಾಗಿ ಜಾರಿಗೆ ತಂದಿದ್ದರೆ ಜಿಲ್ಲೆ ನಂದನವನ ಆಗುತ್ತಿತ್ತು.ರೈತರ ಆತ್ಮಹತ್ಯೆ ಪ್ರಶ್ನೆಯೇ ಬರುತ್ತಿರಲಿಲ್ಲ ಎಂದು ತಿಳಿಸಿದರು.
ನಮ್ಮೂರಿನ ಅಭಿವೃದ್ಧಿ ನಮ್ಮ ನೆಮ್ಮದಿ.ನಮ್ಮ ಗುರಿಯೇ ನನಗೆ ಮುಖ್ಯ. ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ 8 ವಿಧಾನಸಭಾ ಕ್ಷೇತ್ರಗಳು, 35 ಹೋಬಳಿಗಳು, 9 ನಗರ ಸ್ಥಳೀಯ ಸಂಸ್ಥೆಗಳು, 247 ಗ್ರಾ.ಪಂ. 1902 ಬೂತ್ಗಳಲ್ಲಿ ಸಾಮಾಜಿಕ ನ್ಯಾಯದಡಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸೋಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಅಭಿವೃದ್ಧಿ ಪೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.