ಮಹಾರಾಷ್ಟ್ರ ಸಾರಿಗೆ ಬಸ್ಸನಿಲ್ಲಿ ದಾಖಲೆಯಿಲ್ಲದ ಹಣ ಪತ್ತೆ

ಬೆಳಗಾವಿ, ಏ.9- ಇಲ್ಲಿಗೆ ಬರುತ್ತಿದ್ದ ಮಹಾರಾಷ್ಟ್ರ ಸಾರಿಗೆ ಬಸ್ ಅನ್ನು ತಡೆದ ಚುನಾವಣಾ ಸಿಬ್ಬಂದಿಗಳು ಪ್ರಯಾಣಿಕರ ತಪಾಸಣೆ ನಡೆಸಿದ ಸಂದರ್ಭದಲ್ಲಿ ಯಾವುದೇ ದಾಖಲೆ ಇಲ್ಲದ 12.94 ಲಕ್ಷ ರೂ. ಪತ್ತೆಯಾಗಿದೆ.

ಇಂದು ಮುಂಜಾನೆ ನಿಪ್ಪಾಣಿ ಪಟ್ಟಣದ ಹೊರ ವಲಯದ ಮುರಗುಡ ರಾಜ್ಯ ಹೆದ್ದಾರಿ ಬಳಿಯ ಚೆಕ್‍ಪೋಸ್ಟ್ ಬಳಿ ತಪಾಸಣೆ ನಡೆಸುವ ವೇಳೆ ಕೊಲ್ಹಾಪುರ ಜಿಲ್ಲೆಯ ರಾಧಾನಗರ ಪಟ್ಟಣದ ನಿವಾಸಿ ವಿಜಯ ಸಾಧೇ ಅವರ ಬಳಿ ಈ ಹಣ ಪತ್ತೆಯಾಗಿದೆ.

ರಾಧಾನಗರದಿಂದ ಕೊಲ್ಹಾಪುರಕ್ಕೆ ಹೋಗುತ್ತಿದ್ದ ಮಹಾರಾಷ್ಟ್ರ ಸಾರಿಗೆ ಬಸ್‍ನಲ್ಲಿ ಬೆಳಗಾವಿಗೆ ತೆರಳುವ ಟಿಕೆಟ್ ಪಡೆದು ಇವರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.

ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು , ಹಣವನ್ನು ಜಪ್ತಿ ಮಾಡಿ ವಿಜಯ ಸಾಧೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಲಾಗಿದೆ.

ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ವರದಿ: ದಾಖಲೆ ಇಲ್ಲದೆ ಆಟೋದಲ್ಲಿ ಸಾಗಿಸುತ್ತಿದ್ದ 6.68 ಲಕ್ಷ ನಗದನ್ನು ಚಿಕ್ಕಮಗಳೂರಿನ ತೇಗೂರು ಪೊಲೀಸ್ ಚೆಕ್‍ಪೋಸ್ಟ್ ಬಳಿ ವಶಪಡಿಸಿಕೊಳ್ಳಲಾಗಿದೆ.

ಕಲ್ಯಾಣನಗರದ ನಿವಾಸಿ ಪ್ರಕಾಶ್, ದಂಟರಮಕ್ಕಿ ನಿವಾಸಿ ಶರತ್ ಮತ್ತು ಸತೀಶ್, ಶಂಕರಪುರದ ಶ್ರೀನಿವಾಸ್, ಗೃಹಮಂಡಳಿ ನಿವಾಸಿ ಹರೀಶ್ ಎಂಬುವರು ಆಟೋದಲ್ಲಿ 6.68,785ಹಣದೊಂದಿಗೆ ಆಲ್ದೂರಿನಿಂದ ನಗರಕ್ಕೆ ಬರುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ನಿರಂಜನ್, ತನಿಖಾ ಮುಖ್ಯಸ್ಥ ಡಾ.ಸುದರ್ಶನ ಹಾಗೂ ಸಿಬ್ಬಂದಿ ಆಟೋವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.ಆಗ ಇವರ ಜೇಬಿನಲ್ಲಿ ಹಣ ಪತ್ತೆಯಾಗಿದೆ. ಕೂಡಲೇ ಐವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ