ಮೈಸೂರು-ಕೊಡಗು ಕ್ಷೇತ್ರದಲ್ಲಿ ದೋಸ್ತಿ ಪಕ್ಷಗಳ ನಡುವೆ ಮೈತ್ರಿ ಕಂಡುಬರುತ್ತಿಲ್ಲ

ಮೈಸೂರು, ಏ.9- ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದರೂ ಮೈಸೂರು-ಕೊಡಗು ಕ್ಷೇತ್ರದಲ್ಲಿ ದೋಸ್ತಿ ಪಕ್ಷಗಳ ನಡುವೆ ಮೈತ್ರಿ ಕಂಡುಬರುತ್ತಿಲ್ಲ.

ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಮತ ಪ್ರಚಾರ ಮಾಡುವಂತೆ ವರಿಷ್ಠರು ಸೂಚಿಸಿ ಸಭೆ ನಡೆಸಿದ್ದರೂ ಕೂಡ ಕಾರ್ಯಕರ್ತರಲ್ಲಿ ಒಮ್ಮತ ಕಂಡುಬರುತ್ತಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಕಾಂಗ್ರೆಸ್ ಮುಖಂಡು ಸಭೆ ನಡೆಸಿ ಈ ಬಾರಿ ಮೈಸೂರಿನಲ್ಲಿ ಕೋಮುವಾದಿ ಪಕ್ಷ ಬಿಜೆಪಿ ಗೆಲ್ಲಲು ಅವಕಾಶ ಮಾಡಿಕೊಡಬಾರದು.ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಮುನಿಸು ಬಿಟ್ಟು ಎಲ್ಲರೂ ಒಂದಾಗಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಸೂಚಿಸಿದ್ದರು.

ಸಭೆ ನಡೆದು ಎರಡು-ಮೂರು ದಿನಗಳು ಕಳೆದರೂ ಮೈತ್ರಿ ಅಭ್ಯರ್ಥಿ ವಿಜಯ್‍ಶಂಕರ್ ಪರವಾಗಿ ಕೇವಲ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಪ್ರಚಾರ ನಡೆಸುತ್ತಿದ್ದಾರೆ.ಆದರೆ, ಜೆಡಿಎಸ್‍ನ ಯಾವುದೇ ಶಾಸಕರಾಗಲಿ, ಮಂತ್ರಿಯಾಗಲಿ, ಮುಖಂಡರಾಗಲಿ ಪ್ರಚಾರಕ್ಕೆ ಬಂದಿಲ್ಲ.

ಗ್ರಾಮೀಣ ಪ್ರದೇಶಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆಯೇ ಹೊರತು ಜೆಡಿಎಸ್‍ನವರು ಭಾಗಿಯಾಗುತ್ತಿಲ್ಲ. ಇದು ಎರಡೂ ಪಕ್ಷಗಳ ಮುಖಂಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಚುನಾವಣೆಗೆ ಕೇವಲ 10 ದಿನಗಳು ಬಾಕಿ ಇದೆ.ಅಷ್ಟರೊಳಗೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ತೆರಳಿ ಮತಯಾಚಿಸಿಯಾರೆಯೇ ಅಥವಾ ಈ ಬಾರಿಯಾದರೂ ಇಡೀ ಕ್ಷೇತ್ರದ ಮತದಾರರನ್ನು ತಲುಪಲು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ