ಬೀದರ್: ಭಾಲ್ಕಿ ಐದು ವರ್ಷಗಳಲ್ಲಿ ಯಾವುದೇ ಕೆಲಸ ಮಾಡದ ಬಿಜೆಪಿ ಅಭ್ಯರ್ಥಿ ಭಗವಂತ ಖುಬಾ ಅವರಿಗೆ ಇದು ಕೊನೆ ಚುನಾವಣೆಯಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಇಲ್ಲಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಪದಾಧಿಕಾರಿಗಳ, ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಖೂಬಾ ವಿರುದ್ಧ ವಾಗ್ದಾಳಿ ಮಾಡಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲಾರದ ಖೂಬಾ ಯಾವುದೋ ಗಾಳಿಯ ಅಲೆಯಲ್ಲಿ ಕಳೆದ ಬಾರಿ ಗೆದ್ದಿದ್ದರು. ಕೆಲಸ ಮಾಡದ ಖೂಬಾ ಅವರನ್ನು ಮನೆಗೆ ಕಳಿಸಲು ಕ್ಷೇತ್ರದ ಮತದಾರರು ಸಂಕಲ್ಪ ಮಾಡಿದ್ದಾರೆ.
ಏನೇನೂ ಕೆಲಸ ಮಾಡದ ಭಗವಂತ ಖುಬಾ ಒಬ್ಬ ಅಸಮರ್ಥ, ರಾಜಕೀಯ ಅನುಭವ ಇಲ್ಲದ ವ್ಯಕ್ತಿ. ಇಂತಹ ವ್ಯಕ್ತಿಯನ್ನು ಲೋಕಸಭೆಗೆ ಕಳಿಸುವ ಅಗತ್ಯವೇನಿದೆ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.
ಭಗವಂತ ಖೂಬಾ ಅವರಿಂದ ಜಿಲ್ಲೆಯ ಅಭಿವೃಧ್ಧಿ ಸಾಧ್ಯವಿಲ್ಲ ಎನ್ನುವುದು ಈಗಾಗಲೇ ಖಚಿತವಾಗಿದೆ.
ಬಿಜೆಪಿಯವರ ಬಣ್ಣದ ಮಾತುಗಳಿಗೆ ಮತದಾರರು ಮತ್ತೊಂದು ಬಾರಿ ಮೊಸ ಹೋಗಬಾರದು ಎಂದು ಖಂಡ್ರೆ ಎಚ್ಚರಿಸಿದರು. ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡಿರುವ ಖೂಬಾ ಹೀನಾಯವಾಗಿ ಸೋಲುವುದು ಖಚಿತವಾಗಿದೆ. ಖೂಬಾ ಪಾಲಿಗೆ ಇದು ಕೊನೆಯ ಚುನಾವಣೆಯಾಗಲಿದೆ ಎಂದು ಖಂಡ್ರೆ ಹೇಳಿದರು.
ಮಾತೆತ್ತಿದ್ದರೆ ರೈಲ್ವೆ , ಹೆದ್ದಾರಿ ವಿಷಯ ಪ್ರಸ್ತಾಪಿಸಲಾಗುತ್ತಿದೆ. ವಾಸ್ತವಿಕವಾಗಿ ಇವೆಲ್ಲವೂ ದಿ. ಕಾಂಗ್ರೆಸ್ ಸರಕಾರದಲ್ಲಿ ಮಂಜುರಾದ ಯೋಜನೆಗಳು. ಬೀದರ್ ಕಲಬುರಗಿ ರೈಲು ಮಾರ್ಗ ನಿರ್ಮಾಣಕ್ಕೆ ಅಧಿಕ ಅನುದಾನ ನೀಡಿದ್ದು ಯುಪಿಎ ಸರಕಾರ. ಆದರೆ, ಎಲ್ಲವನ್ನೂ ತಾನೇ ಮಾಡಿದ್ದಾಗಿ ಹೇಳಿಕೊಳ್ಳುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ ಎಂದು ಈಶ್ವರ ಖಂಡ್ರೆ ದೂರಿದರು.
ಬೀದರ್ ಭಾಲ್ಕಿ ರಸ್ತೆ ಗುಣಮಟ್ಟದ್ದಾಗಿತ್ತು. 10 ಮೀಟರ್ ಅಗಲದ ಸಿಸಿ ರಸ್ತೆ ನಿರ್ಮಿಸುವುದಾಗಿ ಕೇಂದ್ರ ಹೇಳಿತ್ತು. ಜನರಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಯಾವುದೇ ತಕರಾರು ಎತ್ತಲಿಲ್ಲ. 300 ಕೋಟಿ ರೂ. ವೆಚ್ಚದಲ್ಲಿ 20 ತಿಂಗಳಲ್ಲಿ ರಸ್ತೆ ನಿರ್ಮಾಣ ಪೂರ್ಣಗೊಳಿಸಬೇಕಿತ್ತು. ಆದರೆ, ಮೂರು ವರ್ಷ ಕಳೆಯುತ್ತ ಬಂದರೂ ಸಿಸಿ ರಸ್ತೆ ನಿರ್ಮಾಣ ಪೂರ್ಣಗೊಂಡಿಲ್ಲ. ಅಕ್ಕಪಕ್ಕದ ಹೊಲಗಳಲ್ಲಿ ಬೆಳೆ ಧೂಳಿನಿಂದ ಹಾಳಾಗಿದೆ.
ರಸ್ತೆ ಸಂಚಾರ ಕಷ್ಟಕರವಾಗಿದೆ. ಬೈಕ್ ಬಿದ್ದು ಗಾಯಗೊಳ್ಳುವ ಘಟನೆಗಳು ನಡೆಯುತ್ತಲೇ ಇವೆ. ಇದೆಲ್ಲವೂ ಖೂಬಾ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.
ಸಿಸಿ ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿಲ್ಲ. ಜೊತೆಗೆ ನಿರ್ಮಾಣ ಕಾರ್ಯವನ್ನೇ ನಿಲ್ಲಿಸಲಾಗಿದೆ. ಅಲ್ಲೊಂದು ಕಿಮೀ, ಇಲ್ಲೊಂದು ಕಿ.ಮೀ. ನಿರ್ಮಿಸಲಾಗಿದೆ. ಇದೇನಾ ಖೂಬಾ ಕೊಡುಗೆ ಎಂದು ಖಂಡ್ರೆಯವರು ಹರಿಹಾಯ್ದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹೆಸರು ಹೇಳಿಕೊಂಡು ಖೂಬಾ ಪ್ರಚಾರ ಪಡೆಯುವುದು ಸಾಮಾನ್ಯವಾಗಿದೆ. ಆದರೆ, ಈಯೋಜನೆಯ ಮಾರ್ಗಸೂಚಿ ಬದಲಾಯಿಸಿ, ಖಾಸಗಿ ಕಂಪೆನಿಗಳಿಗೆ ಅನುಕೂಲವಾಗುವಂತೆ ಮಾಡಲಾಗಿದೆ. 2017-18 ನೇ ಸಾಲಿನ ಮುಂಗಾರುಹಂಗಾಮಿನಲ್ಲಿ ನಾಲ್ಕೇ ತಿಂಗಳಲ್ಲಿ ವಿಮೆ ಕಂಪೆನಿಗೆ ಬೀದರ್ ಜಿಲ್ಲೆಯೊಂದರಿಂದಲೇ 185 ಕೋಟಿ ರೂ. ಲಾಭ ಆಗಿದೆ. 14.60 ಕೋಟಿ ರೂ. ವಿಮಾ ಕಂತು ಪಾವತಿಸಿದ ರೈತರಿಗೆ ಬರೀ 95 ಲಕ್ಷ ರೂ. ಪರಿಹಾರ ಸಿಕ್ಕಿದೆ ಎಂದು ಈಶ್ವರ ಖಂಡ್ರೆ ಮಾಹಿತಿ ನೀಡಿದರು.
ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಫಸಲ್ ಬಿಮಾ ಯೋಜನೆ ಬಗ್ಗೆ ಭಗವಂತ ಖುಬಾ ಮೌನವಾಗಿದ್ದಾರೆ ಎಂದು ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು. ಈ ಯೋಜನೆಯಲ್ಲಿನ ಲೋಪದೋಷಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಮುಖ್ಯಮಂತ್ರಿಯವರು ಹೊಸ ವಿಮಾ ಯೋಜನೆ ಘೋಷಿಸಿದ್ದಾರೆ. ರೈತರಿಗೆ ಅನುಕೂಲವಾಗುವಂತಹ ಯೋಜನೆಯನ್ನು ರಾಜ್ಯ ಸರಕಾರ ರೂಪಿಸುತ್ತಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಬೀದರ್ ಜಿಲ್ಲೆಗೆ ಖಂಡ್ರೆ ಪರಿವಾರದ ಕೊಡುಗೆ ಏನು ಎಂದು ಭಗವಂತ ಖೂಬಾ ಪ್ರಶ್ನಿಸುತ್ತಿದ್ದಾರೆ. ಬೀದರ್ ಸಹಕಾರಿ ಸಕ್ಕರೆ ಕಾರಖಾನೆ ಮಾಡಿದ್ದು ಯಾರು, ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದವರು ಯಾರು, ಶಾಲಾ ಕಾಲೇಜು ಆರಂಭಿಸಿದವರು ಯಾರು ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.
ದೇಶದ ಸುರಕ್ಷತೆಗಾಗಿ ಮೋದಿಗೆ ಮತ ನೀಡಿ ಎಂದು ಬಿಜೆಪಿಯವರು ಕೇಳಿಕೊಳ್ಳುತ್ತಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್. ತ್ಯಾಗ ಬಲಿದಾನ ಮಾಡಿದ್ದು ಕಾಂಗ್ರೆಸ್. ಸ್ವಾತಂತ್ರ್ಯದ ನಂತರ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವಂತಾಗಲು ಶ್ರಮಿಸಿದ್ದು ಕಾಂಗ್ರೆಸ್. ದೇಶದ ಅಖಂಡತೆ, ಸಮಗ್ರತೆಯನ್ನು ಕಾಪಾಡಿದ್ದು ಸಹ ಕಾಂಗ್ರೆಸ್. ಆದರೆ, ಬಿಜೆಪಿಯವರು ಈ ವಾಸ್ತವವನ್ನು ಮುಚ್ಚಿಟ್ಟು ಸುರಕ್ಷತೆಯ ಮಾತು ಆಡುತ್ತಿದ್ದಾರೆ. ಭವ್ಯ ಭಾರತ ನಿರ್ಮಾಣಕ್ಕಾಗಿ ಗಟ್ಟಿ ಅಡಿಪಾಯ ಹಾಕಿರುವ ಕಾಂಗ್ರೆಸ್ಗೆ ದೇಶದ ಸುರಕ್ಷತೆ ಎಂದೂ ಸವಾಲಾಗಿಲ್ಲ ಎನ್ನುವುದನ್ನು ಮತದಾರರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ರಕ್ಷಣೆಗಾಗಿ, ದೇಶದ ಪ್ರಗತಿಗಾಗಿ ಕಾಂಗ್ರೆಸ್ಅನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಮಾಜಿ ಜಿಪಂ ಸದಸ್ಯ ಶಿವರಾಜ ಹಾಸನಕರ್ ಮಾತನಾಡಿ, ಲೋಕಸಭೆ ಪ್ರವೇಶಿಸುವ ಅರ್ಹತೆ, ಸಾಮಥ್ರ್ಯಗಳೆರಡೂ ಈಶ್ವರ ಖಂಡ್ರೆ ಅವರಿಗಿವೆ ಎಂದು ಹೇಳಿದರು. ಪ್ರತಿ ಊರಿನಲ್ಲಿ ಕಾಂಗ್ರೆಸ್ಗೆ ಕನಿಷ್ಠ ಒಂದುಸಾವಿರ ಮತಗಳ ಲೀಡ್ ಸಿಗುವಂತಾಗಬೇಕು. ಪಕ್ಷದ ಕಾರ್ಯಕರ್ತರು ಮತಗಟ್ಟೆಗಳನ್ನು ಗಟ್ಟಿಗೊಳಿಸಬೇಕು ಎಂದು ಹಾಸನಕರ್ ಸಲಹೆ ನೀಡಿದರು.
ಗೆಲ್ಲುವ ಸಾಮಥ್ರ್ಯ ಇದ್ದಿದ್ದರಿಂದಲೇ ಕಾಂಗ್ರೆಸ್ ನಾಯಕರು ಈಶ್ವರ ಖಂಡ್ರೆ ಅವರನ್ನು ಕಣಕ್ಕೆ ಇಳಿಸಿದ್ದಾರೆ.
ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಕೆಲ ದಿನಗಳ ಹಿಂದಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಪ್ರಕಾಶ ಮಾಶೆಟ್ಟಿ ಮಾತನಾಡಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಕಟ್ಟಲು ಪ್ರಾಮಾಣಿಕವಾಗಿ ದುಡಿದವರು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಬ್ಬರ ಹೆಸರು ಘೋಷಣೆ ಮಾಡಲಾಯಿತು. ನಂತರ ಮತ್ತೊಬ್ಬ ಅಯೋಗ್ಯ ವ್ಯಕ್ತಿಯನ್ನು ಕಣಕ್ಕಿಲಿಸಲಾಯಿತು. ಇಂತಹ ಅನ್ಯಾಯಗಳು ಬಿಜೆಪಿಯಲ್ಲಿ ನಡೆಯುವುದು ಸಾಮಾನ್ಯವಾಗಿದೆ ಎಂದು ದೂರಿದರು. ಈಶ್ವರ ಖಂಡ್ರೆ ಅವರ ಜನಪರ ಕಾಳಜಿ, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಸೇರಿದ್ದಾಗಿ ಹೇಳಿದರು.
ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಬುಳ್ಳಾ, ಪ್ರಚಾರ ಸಮಿತಿ ಅಧ್ಯಕ್ಷ ಬಸೀರೋದ್ದಿನ್ ಹಾಲಹಿಪ್ಪರ್ಗಾ, ಭಾಳ್ಕಿ ನಗರ ಕಾಂಗ್ರೆಸ್ ಅಧ್ಯಕ್ಷ ನಸೀರೋದ್ದಿನ್, ಶಾಂತಯ್ಯ ಸ್ವಾಮಿ ನಾವದಗಿ ಮತ್ತಿತರರು ಮಾತನಾಡಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತ ಚಹ್ವಾಣ್ ನಿರೂಪಿಸಿದರು.
ಪ್ರಮುಖರಾದ ಶಂಕರರಾವ ದೊಡ್ಡಿ, ಮಡಿವಾಳಪ್ಪ ಮಂಗಲಗಿ, ವೈಜನಾಥ ಪಾಟೀಲ್, ಶಿವಶರಣಪ್ಪ ಛತ್ರೆ, ಅಶೋಕ ಪಾಟೀಲ್, ಸೋಮನಾಥ ಅಷ್ಟೂರೆ, ವಿಲಾಸ ಮೋರೆ ಮತ್ತಿತರ ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.