ಕಲಬುರಗಿ,ಏ.9- ಬಂಜಾರ ಸಮುದಾಯದ ಮತಗಳು ಕೈ ತಪ್ಪಿ ಹೋಗುವ ಭೀತಿಯಲ್ಲಿರುವ ಕಾಂಗ್ರೆಸ್ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. ಸಮುದಾಯದ ಮುಖಂಡರು, ಕಾರ್ಯಕರ್ತರನ್ನು ಸೆಳೆಯುವ ರಣ ತಂತ್ರ ರೂಪಿಸಿದೆ.
ಗುರುಮಿಠ್ಕಕಲ್ನಲ್ಲಿ ಕೈ ಮುಖಂಡರು ಇಂದು ಮಹತ್ವದ ಸಭೆ ನಡೆಸಿದರು.ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 3 ಲಕ್ಷದಷ್ಟು ಬಂಜಾರ ಸಮುದಾಯದ ಮತಗಳಿದ್ದು ಈವರೆಗೆ ಆ ಸಮುದಾಯ ಕಾಂಗ್ರೆಸ್ನ ಮತಬ್ಯಾಂಕ್ ಆಗಿತ್ತು.ಈಗ ಅದೇ ಸಮುದಾಯದ ಮುಖಂಡ ಉಮೇಶ್ ಜಾಧವ್ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಬಿಜೆಪಿಯ ಹುರಿಯಾಳಾಗಿದ್ದಾರೆ. ಇದಲ್ಲದೇ ಕಾಂಗ್ರೆಸ್ನ ಕಟ್ಟಾ ಬೆಂಬಲಿಗರಾಗಿದ್ದ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್, ಎ.ಬಿ.ಮಾಲಕರೆಡ್ಡಿಯವರೆಲ್ಲ ಉಮೇಶ್ ಜಾಧವ್ ಬೆಂಬಲಕ್ಕೆ ನಿಂತಿದ್ದಾರೆ.
ಲಂಬಾಣಿ ಸಮುದಾಯದ ಶ್ರೀಗಳು ಸಮುದಾಯದವರ ಪರವಾಗಿ ನಿಂತಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದ್ದು ಉಮೇಶ್ ಜಾಧವ್ ಮಣಿಸಲು ರಣತಂತ್ರ ರೂಪಿಸಿದ್ದು, ನಿನ್ನೆ ಶರಣ ಪ್ರಕಾಶ ಪಾಟೀಲ, ಬಿ.ಆರ್.ಪಾಟೀಲ್ ಸೇರಿದಂತೆ ಅನೇಕ ಮುಖಂಡರ ಜೊತೆ ಮಹತ್ವದ ಸಭೆ ನಡೆಸಿದೆ.