ನಾಳೆ ಪ್ರಧಾನಿ ಮೋದಿಯವರಿಂದ ಮೈಸೂರು ಮತ್ತು ಚಿತ್ರದುರ್ಗದಲ್ಲಿ ಬಹಿರಂಗ ಪ್ರಚಾರ

ಬೆಂಗಳೂರು,ಏ.8- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಎರಡು ಕಡೆ ಬಹಿರಂಗ ಪ್ರಚಾರ ನಡೆಸುವ ಮೂಲಕ ಲೋಕಸಮರಕ್ಕೆ ವಿದ್ಯುಕ್ತವಾಗಿ ರಣಕಹಳೆ ಮೊಳಗಿಸಲಿದ್ದಾರೆ.

ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಪ್ರಧಾನಮಂತ್ರಿ ಹಾಗೂ ಬಿಜೆಪಿಯ ತಾರಾ ಪ್ರಚಾರಕರಾದ ಮೋದಿ ಅವರು ಮೊದಲ ಬಾರಿಗೆ ಕೋಟೆ ನಾಡು ಚಿತ್ರದುರ್ಗ ಹಾಗೂ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ನಡೆಸಿದರು.

ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ಬಂದಿದೆ.ಇತ್ತ ಪ್ರತಿ ಪಕ್ಷಗಳ ಕೂಡ ನರೇಂದ್ರಮೋದಿ ಅವರು ತಮ್ಮ ಭಾಷಣದಲ್ಲಿ ಮಾಡುವ ಆರೋಪಕ್ಕೆ ಪ್ರತ್ಯುತ್ತರ ನೀಡಲು ಸಜ್ಜಾಗಿವೆ.

ನಾಳೆ ಮಧ್ಯಾಹ್ನ 1 ಗಂಟೆಗೆ ಮೋದಿ ಅವರು ಓಬವ್ವನ ನಾಡು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಪರ ಮತಯಾಚನೆ ಮಾಡಲಿರುವ ಮೋದಿಗೆ ರಾಜ್ಯ ನಾಯಕರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಕೆ.ಎಸ್.ಈಶ್ವರಪ್ಪ , ಆರ್.ಅಶೋಕ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು, ಚಳ್ಳಕೆರೆ, ಪಾವಗಡ ಮತ್ತು ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 2 ಲಕ್ಷಕ್ಕೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಜಮಾಯಿಸುತ್ತಿದ್ದು, ಬಿಜೆಪಿ ಸಕಲ ಸಿದ್ದತೆ ಮಾಡಿಕೊಂಡಿದೆ.

ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಕಳೆದ ಒಂದು ವಾರದಿಂದ ಬಿಜೆಪಿ ನಾಯಕರು ಮತ್ತು ಪದಾಧಿಕಾರಿಗಳು ಹಗಲಿರುಳು ಶ್ರಮಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆ ವೇಳೆ ಮೋದಿ ಅವರು ಚಿತ್ರದುರ್ಗದಲ್ಲಿ ಪ್ರಚಾರ ನಡೆಸಿದ ಪರಿಣಾಮ ಆರು ಕ್ಷೇತ್ರಗಳ ಪೈಕಿ 5 ಕಡೆ ಗೆಲುವು ಸಾಧೀಸಿತ್ತು.

ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ/ವರ್ಗ, ವಾಲ್ಮೀಕಿ ಸಮುದಾಯ ಬಿಜೆಪಿ ಬೆಂಬಲಕ್ಕೆ ನಿಂತಿತ್ತು.ಹೀಗಾಗಿ ಈಬಾರಿಯೂ ಮೋದಿ ಅವರು ಚಿತ್ರದುರ್ಗದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರೆ ಸಹಜವಾಗಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದು.

ಕಾರ್ಯಕ್ರಮದ ಉಸ್ತುವಾರಿಯನ್ನು ಆರ್.ಅಶೋಕ್‍ಗೆ ವಹಿಸಲಾಗಿದೆ. ಉಳಿದಂತೆ ಶಾಸಕರಾದ ಶ್ರೀರಾಮುಲು, ಗೂಳಿಹಟ್ಟಿ ಶೇಖರ್, ಚಂದ್ರಪ್ಪ , ಪೂರ್ಣಿಮಾ ಶ್ರೀನಿವಾಸ್,ತಿಪ್ಪಾರೆಡ್ಡಿ,ಅಭ್ಯರ್ಥಿ ಕೆ.ನಾರಾಯಣಸ್ವಾಮಿ ಸೇರಿದಂತೆ ಅನೇಕರು ಪಕ್ಷದ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ.

ಸಾಂಸ್ಕøತಿಕ ನಗರಿಯಲ್ಲಿ ಮೋದಿ:
ಚಿತ್ರದುರ್ಗ ಕಾರ್ಯಕ್ರಮದ ನಂತರ ಪ್ರಧಾನಿಯವರು ನೇರವಾಗಿ ಅಲ್ಲಿಂದ ಸಾಂಸ್ಕøತಿಕನಗರಿ ಮೈಸೂರಿನಲ್ಲಿ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡುವರು.

ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಪ್ರತಾಪ್ ಸಿಂಹ ಮತ್ತು ವಿ.ಶ್ರೀನಿವಾಸ್‍ಪ್ರಸಾದ್ ಪರ ಬಹಿರಂಗ ಪ್ರಚಾರ ನಡೆಸಿ ಹೆಚ್ಚಿನ ಮತಗಳ ಅಂತರದಿಂದ ಮತ್ತೊಮ್ಮೆಲೋಕಸಭೆಗೆ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಲಿದ್ದಾರೆ.

ಸಂಜೆ 4 ಗಂಟೆಗೆ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಬಹುದಿನಗಳ ನಂತರ ಮೈಸೂರಿಗೆ ಮೋದಿ ಆಗಮಿಸುತ್ತಿರುವುದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಸಂತಸ ಇಮ್ಮಡಿಗೊಂಡಿದೆ.

ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸುವ ಸಾಧ್ಯತೆ ಇದೆ. ಶಾಸಕರಾದ ಎ.ರಾಮದಾಸ್, ನಾಗೇಂದ್ರ, ಗುಂಡ್ಲುಪೇಟೆಯ ನಿರಂಜನ್‍ಕುಮಾರ್, ಹರ್ಷವರ್ಧನ್, ಅಭ್ಯರ್ಥಿಗಳಾದ ಪ್ರತಾಪ್ ಸಿಂಹ್, ಶ್ರೀನಿವಾಸ ಪ್ರಸಾದ್ ಸೇರಿದಂತೆ ಎರಡು ಜಿಲ್ಲೆಯ ಮುಖಂಡರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಣ ತೊಟ್ಟಿದ್ದಾರೆ.

ಈ ಹಿಂದೆ ಮೋದಿ ಅವರು ಚುನಾವಣೆ ಘೋಷಣೆಯಾಗುವ ಮುನ್ನವೇ ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು. ವಿಧಾನಸಭೆ ಚುನಾವಣೆ ವೇಳೆ ಅಂದಿನ ಕಾಂಗ್ರೆಸ್ ಸರ್ಕಾರವನ್ನು10% ಕಮೀಷನ್ ಸರ್ಕಾರ ಎಂದು ಮೋದಿ ಟೀಕಿಸಿದ್ದು ಭಾರೀ ಪ್ರಚಾರ ಪಡೆದುಕೊಂಡಿತ್ತು.

ನಾಳೆ ದೋಸ್ತಿ ಸರ್ಕಾರ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಯಾವ ಬಾಣ ಬಿಡಲಿದ್ದಾರೆ ಎಂಬುದನ್ನು ಸಮ್ಮಿಶ್ರ ಸರ್ಕಾರ ಕಾತುರದಿಂದ ಎದುರು ನೋಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ