ರಾಜ್ಯದ 2ನೇ ಹಂತದ ಮತದಾನ-ನಾಮಪತ್ರ ವಾಪಸ್ ಪಡೆಯುವ ಕ್ರಿಯೆಗೆ ತೆರೆ

ಬೆಂಗಳೂರು,ಏ.7- ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯುವ ಗಡುವಿಗೆ ಇಂದು ತೆರೆಬಿದ್ದಿದ್ದು, ಸಂಜೆ ವೇಳೆಗೆ ಅಂತಿಮ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಕೆಲವು ಪಕ್ಷೇತರ ಅಭ್ಯರ್ಥಿಗಳು ಕೊನೆಯ ದಿನವಾದ ಇಂದು ಕೆಲವು ಕ್ಷೇತ್ರಗಳಲ್ಲಿ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಅಂತಿಮ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದ್ದಾರೆ.

ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬೀದರ್, ಬಳ್ಳಾರಿ, ಕಲಬುರಗಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ರಾಯಚೂರು, ಕೊಪ್ಪಳ, ವಿಜಾಪುರ, ಹಾವೇರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಏ.23ರಂದು ಮತದಾನ ನಡೆಯಲಿದೆ.

ಈ ಕ್ಷೇತ್ರಗಳಲ್ಲಿ ಮಾ.28ರಿಂದ ಏ.4ರವರೆಗೆ ಒಟ್ಟು 318 ಅಭ್ಯರ್ಥಿಗಳು 457 ನಾಮಪತ್ರ ಸಲ್ಲಿಸಿದ್ದರು.ಶುಕ್ರವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ 36 ಅಭ್ಯರ್ಥಿಗಳ ನಾಮಪತ್ರ ತಿರಸ್ಕøತಗೊಂಡಿದ್ದು, 282 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು.

ಶನಿವಾರ ಮತ್ತು ಭಾನುವಾರ ರಜಾ ದಿನವಾಗಿದ್ದರಿಂದ ಯಾರೂ ನಾಮಪತ್ರವನ್ನು ವಾಪಸ್ ಪಡೆದಿರಲಿಲ್ಲ.

ಈ ಪೈಕಿ 270 ಪುರುಷ, 12 ಮಹಿಳಾ ಹಾಗೂ 171 ಪಕ್ಷೇತರರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ರಾಷ್ಟ್ರೀಯ ಪಕ್ಷಗಳಿಂದ 39 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನಿಂದ ಮೂರು ಮಂದಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಇತರೆ ಪಕ್ಷಗಳಿಂದ ಒಟ್ಟು 69 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಮೊದಲ ಹಂತದ ಉಳಿದ 14 ಕ್ಷೇತ್ರಗಳಿಗೆ ಏ.18ರಂದು ಮತದಾನ ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣಾ ಕಣದಲ್ಲಿ 241 ಅಭ್ಯರ್ಥಿಗಳು ಇದ್ದಾರೆ.

ಈ ಎರಡು ಹಂತದ ಮತ ಎಣಿಕೆ ಮೇ 23ರಂದು ನಡೆಯಲಿದ್ದು ಅಂದು ಫಲಿತಾಂಶ ಹೊರಬೀಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ