ಚುನಾವಣಾ ಕಾರ್ಯಕ್ಕೆ ಬಿಎಂಟಿಸಿ ಹಾಗೂ ಕೆಸ್‍ಆರ್‍ಟಿಸಿಯ 5000 ಬಸ್

ಬೆಂಗಳೂರು, ಏ.8-ರಾಜ್ಯದ ಮೊದಲ ಹಂತದ ಲೋಕಸಭೆ ಚುನಾವಣೆ ಕಾರ್ಯಕ್ಕೆ ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿಯ ಸುಮಾರು 5 ಸಾವಿರ ಬಸ್‍ಗಳನ್ನು ನೀಡಲಾಗುತ್ತಿದೆ.

ಏ.18 ರಂದು ಮೊದಲ ಹಂತದ ಮತದಾನ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ.ಏ.17 ಹಾಗೂ 18 ರಂದು ಚುನಾವಣಾ ಕಾರ್ಯಕ್ಕೆ ಬಸ್‍ಗಳನ್ನು ನೀಡಲಾಗುತ್ತಿದ್ದು, ದೈನಂದಿನ ಪ್ರಯಾಣದಲ್ಲಿ ವ್ಯತ್ಯಯವಾಗಲಿದೆ.
ಕೆಎಸ್‍ಆರ್‍ಟಿಸಿಯಿಂದ ಮೂರೂವರೆ ಸಾವಿರ ಹಾಗೂ ಬಿಎಂಟಿಸಿಯಿಂದ 1500 ಬಸ್‍ಗಳನ್ನು ಚುನಾವಣಾ ಕಾರ್ಯಕ್ಕೆ ನೀಡಲಾಗುತ್ತಿದೆ ಎಂದು ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಮೂಲಗಳು ತಿಳಿಸಿವೆ.

ಏ.17 ರಂದು ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ಮತ್ತು ಮತ ಯಂತ್ರಗಳನ್ನು ಕೊಂಡೊಯ್ಯಲು ಬಸ್‍ಗಳನ್ನು ಬಳಸಿಕೊಳ್ಳಲಾಗುತ್ತದೆ. ಮತದಾನ ಮುಗಿದ ನಂತರ ಮತದಾನ ಸಿಬ್ಬಂದಿ ಮತ್ತು ಮತಯಂತ್ರಗಳನ್ನು ಮತ್ತೆ ವಾಪಸ್ ಕರೆತರಲಾಗುತ್ತದೆ. ಹೀಗಾಗಿ ಪ್ರತಿ ಚುನಾವಣೆಯಂತೆ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲೂ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಏ.17 ಮತ್ತು 18 ರಂದು ಸಾರಿಗೆ ಸಂಸ್ಥೆಯ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರಿಗೂ ತೊಂದರೆಯಾಗಲಿದೆ.ಆದರೂ ಮತದಾನದ ದಿನದಂದು ಪ್ರಯಾಣಿಕರ ಸಂಖ್ಯೆ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಅಲ್ಲದೆ, ಗರಿಷ್ಠ ಪ್ರಮಾಣದಲ್ಲಿ ಪ್ರಯಾಣಿಕರಿಗಾಗುವ ತೊಂದರೆ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ.

ಚುನಾವಣೆಗಾಗಿ ಬಸ್‍ಗಳನ್ನು ಕೊಡಬೇಕಾದ ಅನಿವಾರ್ಯತೆಯೂ ಇದೆ ಎಂದು ಕೆಎಸ್‍ಆರ್‍ಟಿಸಿಯ ಮುಖ್ಯಸಂಚಾರ ವ್ಯವಸ್ಥಾಪಕ (ವಾಣಿಜ್ಯ) ರಾಜೇಶ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ