ರಾಜ್ಯದಿಂದ ಕಣದಲ್ಲಿರುವ ಒಬ್ಬರು ಮಾಜಿ ಪ್ರಧಾನಿ-ಒಬ್ಬರು ಸಚಿವರು-24 ಮಂದಿ ಹಾಲಿ ಸದಸ್ಯರು

ಬೆಂಗಳೂರು, ಏ.5- ಲೋಕಸಮರದ ಕಣದಲ್ಲಿ ಈ ಬಾರಿ ಒಬ್ಬರು ಮಾಜಿ ಪ್ರಧಾನಿ, ಒಬ್ಬರು ಸಚಿವರು ಹಾಗೂ 24 ಮಂದಿ ಹಾಲಿ ಸಂಸದರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ಎರಡು ಕ್ಷೇತ್ರಗಳಲ್ಲಿ ಹಾಲಿ ಶಾಸಕರನ್ನೇ ಕಣಕ್ಕಿಳಿಸಲಾಗಿದೆ. ಒಬ್ಬ ಎಂಎಲ್‍ಸಿ ಕೂಡ ಚುನಾವಣಾ ಅಖಾಡದಲ್ಲಿದ್ದಾರೆ.

ತುಮಕೂರು, ಬೆಂಗಳೂರು ದಕ್ಷಿಣ, ಮಂಡ್ಯ, ಹಾಸನ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಕಡೆ ಹಾಲಿ ಸಂಸದರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಮರು ಆಯ್ಕೆ ಬಯಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದೆ. ಹೀಗಾಗಿ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಟಿಕೆಟ್ ವಂಚಿತರಾಗಿದ್ದಾರೆ.ಮಂಡ್ಯದಲ್ಲಿ ಹಾಲಿ ಸಂಸದರಾಗಿದ್ದ ಎಲ್.ಆರ್.ಶಿವರಾಮೇಗೌಡ ಅವರ ಬದಲಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣರಿಗೆ ಕ್ಷೇತ್ರ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಬೆಂಗಳೂರು ದಕ್ಷಿಣ ಕೇಂದ್ರವನ್ನು ಆರು ಬಾರಿ ಪ್ರತಿನಿಧಿಸಿ ಕೇಂದ್ರ ಸಚಿವರೂ ಆಗಿದ್ದ ಅನಂತ್‍ಕುಮಾರ್ ಅವರ ಅಕಾಲಿಕ ನಿಧನದಿಂದ ಬೆಂಗಳೂರು ದಕ್ಷಿಣದಲ್ಲೂ ಹಾಲಿ ಸಂಸದರು ಇಲ್ಲದಂತಾಗಿದೆ.

ಈ ನಾಲ್ಕೂ ಕ್ಷೇತ್ರಗಳಲ್ಲಿ ಸಂಸದರ ಹೊರತಾದ ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಅದರಲ್ಲೂ ಮಂಡ್ಯ ಮತ್ತು ತುಮಕೂರು ಹೈವೋಲ್ಟೇಜ್ ಕ್ಷೇತ್ರಗಳಾಗಿವೆ.

ಕಾಂಗ್ರೆಸ್ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ. ಅದರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಚಿವರಾದ ಕೃಷ್ಣಬೈರೇಗೌಡ ಅವರನ್ನೇ ಕೇಂದ್ರ ಸಚಿವ ಬಿಜೆಪಿ ಡಿ.ವಿ.ಸದನಾಂದಗೌಡ ಅವರ ವಿರುದ್ಧ ಕಣಕ್ಕಿಳಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪ್ರತಿನಿಧಿಸುತ್ತಿದ್ದ ಬೀದರ್ ಕ್ಷೇತ್ರವನ್ನು ಮತ್ತೆ ಗೆಲ್ಲಬೇಕು ಎಂಬ ಕಾರಣಕ್ಕಾಗಿ ಬಿಜೆಪಿಯ ಭಗವಂತ್‍ಖೂಬಾ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಹಾಲಿ ಬಾಲ್ಕಿ ಕ್ಷೇತ್ರದ ಶಾಸಕ ಈಶ್ವರ್ ಖಂಡ್ರೆ ಅವರನ್ನು ಕಣಕ್ಕಿಳಿಸಲಾಗಿದೆ.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದಿಂದ ಶಾಸಕರಾಗಿದ್ದ ಉಮೇಶ್‍ಜಾಧವ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿದಿದ್ದಾರೆ. ಹೀಗಾಗಿ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದು ಅನಿವಾರ್ಯವಾಗಿದೆ.

ಹಾಲಿ ಶಾಸಕರಾಗಿರುವ ಕೃಷ್ಣಬೈರೇಗೌಡ ಮತ್ತು ಈಶ್ವರ್‍ಖಂಡ್ರೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಇವರು ಸ್ಪರ್ಧಿಸಿದ್ದ ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ಅನಿವಾರ್ಯವಾಗುತ್ತದೆ.

ಕಾಂಗ್ರೆಸ್‍ನ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಅವರನ್ನು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಸಂಸದ ಪಿ.ಸಿ.ಮೋಹನ್ ವಿರುದ್ಧ ಕಣಕ್ಕಿಳಿಸಿದೆ. ಇನ್ನು ರಿಜ್ವಾನ್ ಗೆದ್ದರೆ ಕಾಂಗ್ರೆಸ್‍ಗೆ ಒಂದು ಎಂಎಲ್‍ಸಿ ಸ್ಥಾನ ಹೆಚ್ಚುವರಿಯಾಗಿ ಲಭ್ಯವಾಗಲಿದೆ.

ಬಿಜೆಪಿಯ ಬಿಬಿಎಂಪಿ ಸದಸ್ಯರಾದ ಮುನಿಸ್ವಾಮಿ ಅವರು ಕೋಲಾರದ ಮೀಸಲು ಕ್ಷೇತ್ರದ ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಸ್ಪರ್ಧಿಸಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜಕೀಯವಾಗಿ ಹಳೆಯ ಮುಖಗಳೇ ಸ್ಪರ್ಧೆಯಲ್ಲಿದ್ದು, ಒಂದಷ್ಟು ಕ್ಷೇತ್ರಗಳಲ್ಲಿ ಹೊಸ ಮುಖಗಳು ಕೂಡ ಸ್ಪರ್ಧೆಯಲ್ಲಿವೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ನಳೀನ್‍ಕಟೀಲ್ ವಿರುದ್ಧ ಕಾಂಗ್ರೆಸ್ ಯುವ ನಾಯಕ ಮಿಥುನ್‍ರೈ ಅವರನ್ನು, ಬಳ್ಳಾರಿಯಲ್ಲಿ ಕಾಂಗ್ರೆಸ್‍ನ ಹಾಲಿ ಸಂಸದ ವಿ.ಎಸ್.ಉಗ್ರಪ್ಪ ವಿರುದ್ಧ ಬಿಜೆಪಿಯದೇವೇಂದ್ರಪ್ಪ ಅವರನ್ನು, ಚಿಕ್ಕೋಡಿಯಲ್ಲಿ ಕಾಂಗ್ರೆಸ್‍ನ ಪ್ರಕಾಶ್ ಹುಕ್ಕೇರಿ ವಿರುದ್ಧ ಬಿಜೆಪಿ ಪಕ್ಷದ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಸಾಹೇಲ್ ಜೊಲ್ಲೆ ಕಣಕ್ಕಿಳಿಸಿದರೆ, ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ವಿರುದ್ಧ ಯುವ ನಾಯಕ ತೇಜಸ್ವಿ ಸೂರ್ಯ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಹಾಸನದಲ್ಲಿ ಯುವ ನಾಯಕ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೆ, ಅವರ ವಿರುದ್ಧ ಮಾಜಿ ಸಚಿವ ಎ.ಮಂಜು ಬಿಜೆಪಿಯಿಂದ ಎದುರಾಳಿಯಾಗಿದ್ದಾರೆ.

ಬಾಗಲಕೋಟೆಯಲ್ಲಿ ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡರ ವಿರುದ್ಧ ವೀಣಾ ಕಾಶಪ್ಪನವರ್ ಕಣಕ್ಕಿಳಿದಿದ್ದು, ಲೋಕಸಭಾ ಕ್ಷೇತ್ರಕ್ಕೆ ಇದು ಹೊಸ ಮುಖವಾಗಿದೆ.

ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅಖಾಡದಲ್ಲಿದ್ದು, ವಿರುದ್ಧ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಬ್ಬರೂ ರಾಜಕೀಯಕ್ಕೆ ಹೊಸ ಮುಖಗಳೇ ಆಗಿವೆ.

ವಿಜಯಪುರದಲ್ಲಿ ಬಿಜೆಪಿಯ ರಮೇಶ್‍ಜಿಗಜಿಣಗಿ ವಿರುದ್ಧ ಜೆಡಿಎಸ್ ಹೊಸ ಮುಖ ಡಾ.ಸುನಿತಾ ಚೌವ್ಹಾಣ್ ಅವರನ್ನು ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಹಾಲಿ ಶಾಸಕರು ಹಾಗೂ ಸಂಸದರು ಪರಸ್ಪರ ಕ್ಷೇತ್ರಗಳನ್ನು ಬದಲಿಸಿಕೊಂಡು ಅವರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವುದು ಒಳ್ಳೆಯ ಬೆಳವಣಿಗೆ ಅಲ್ಲ.

ಅನಗತ್ಯ ಚುನಾವಣಾ ವೆಚ್ಚದಿಂದ ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿದೆಯೇ ಹೊರತು, ರಾಜಕೀಯ ಪಕ್ಷಗಳ ಸ್ವಾರ್ಥಕ್ಕೆ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ಈ ಹಿಂದೆ ಸಂಸದರಾಗಿದ್ದ ಶಿವಮೊಗ್ಗದ ಬಿ.ಎಸ್.ಯಡಿಯೂರಪ್ಪ, ಬಳ್ಳಾರಿಯ ಶ್ರೀರಾಮುಲು, ಮಂಡ್ಯದ ಸಿ.ಎಸ್.ಪುಟ್ಟರಾಜು ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾದ ನಂತರ ಲೋಕಸಭಾ ಸದಸ್ಯ ಸ್ಥಾನ ತೆರವಾಗಿ ಈ ಮೂರೂ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಾಯಿತು.

ಈಗ ಹಾಲಿ ಶಾಸಕರಾದ ಕೃಷ್ಣಬೈರೇಗೌಡ, ಈಶ್ವರ್‍ಖಂಡ್ರೆ ಅವರು ಗೆದ್ದರೆ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಾಗಿದೆ. ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರವಾಗಿರುವುದರಿಂದ ಈ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಬೇಕಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ