ಎಲ್ಲಾ ಪಕ್ಷಗಳು ಸೇರಿ ಜೆಡಿಎಸ್ ಮಣಿಸಲು ಷಡ್ಯಂತರ-ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಏ.5- ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿಸಲು ಚಕ್ರವ್ಯೂಹ ಹೆಣೆಯಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅವರು ಹೆಸರಿಗಷ್ಟೇ ಪಕ್ಷೇತರ ಅಭ್ಯರ್ಥಿ.ಅವರ ಬೆಂಬಲಕ್ಕೆ ಎಲ್ಲಾ ಪಕ್ಷಗಳು ಒಗ್ಗೂಡಿ ಚುನಾವಣಾ ತಂತ್ರವನ್ನು ರೂಪಿಸಿವೆ ಎಂದು ಆರೋಪಿಸಿದರು.

ಬಿಜೆಪಿ, ಕಾಂಗ್ರೆಸ್, ರೈತ ಸಂಘ ಎಲ್ಲ ಸೇರಿ ಚಕ್ರವ್ಯೂಹ ರೂಪಿಸಿದ್ದು, ಅದನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಮಂಡ್ಯ ಜನತೆ ನೀಡುವ ವಿಶ್ವಾಸವಿದೆ ಎಂದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್‍ನನ್ನು ಸೋಲಿಸಲು ರೂಪಿಸಿರುವ ಚಕ್ರವ್ಯೂಹಕ್ಕೆ ಮೇ.23ರಂದು ಚುನಾವಣಾ ಫಲಿತಾಂಶ ಹೊರಬಂದ ನಂತರ ಸೂಕ್ತ ಉತ್ತರ ನೀಡುವುದಾಗಿ ಹೇಳಿದರು.

ಕಳೆದ ಮೂರು ತಿಂಗಳಿನಿಂದಲೂ ಮಂಡ್ಯದಲ್ಲಿ ಜೆಡಿಎಸ್ ಮಣಿಸಲು ಕಾರ್ಯತಂತ್ರವನ್ನು ಹೆಣೆಯಲಾಗಿದೆ.ಆದರೆ ಸ್ಥಳೀಯ ಪರಿಸ್ಥಿತಿಯೇ ಭಿನ್ನವಾಗಿದೆ.ಯಾರು ಸರಿಯಾದ ದುಡಿಮೆ ಮಾಡುತ್ತಾರೆ ಎಂಬುದು ಅಲ್ಲಿನ ಜನರಿಗೆ ಗೊತ್ತಿದೆ.ದುಡಿಮೆ ಮಾಡುವವರನ್ನು ಜನರು ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿನ್ನೆ ಮಂಡ್ಯ ಕ್ಷೇತ್ರದ ಕೆ.ಆರ್.ಪೇಟೆಯಲ್ಲಿ ನಿಖಿಲ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಂದರೂ ಸರಿಪಡಿಸಲು ಆಗುವುದಿಲ್ಲ. ಪರಿಸ್ಥಿತಿ ಈಗಾಗಲೇ ಕೈ ಮೀರಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನಲ್ಲಿ ಎಲ್ಲ ಪಕ್ಷಗಳು ಒಗ್ಗೂಡಿ ಜೆಡಿಎಸ್ ಮಣಿಸಲು ಷಡ್ಯಂತರ ರೂಪಿಸಿವೆ ಎಂದು ಆರೋಪಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲೂ ಮೈತ್ರಿ ಅಭ್ಯರ್ಥಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಸ್ಥಳೀಯವಾಗಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಹೊಂದಾಣಿಕೆಯಾಗಿಲ್ಲ. ಇದು ಉಭಯ ಪಕ್ಷಗಳ ನಾಯಕರಿಗೂ ತಲೆನೋವಾಗಿ ಪರಿಣಮಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ