ಬಿಜೆಪಿಯನ್ನು ಮತ್ತೇ ಅಧಿಕಾರಕ್ಕೆ ತರಲು ಮತದಾರರು ಬೆಂಬಲಿಸಬೇಕು-ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು,ಏ.4- ದೇಶದ ರಕ್ಷಣೆಗೆ ಒತ್ತು ನೀಡಿ, ಭ್ರಷ್ಟಾಚಾರರಹಿತ ಆಡಳಿತ ನಡೆಸಿರುವ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮತದಾರರು ತಮ್ಮನ್ನು ಬೆಂಬಲಿಸಬೇಕು ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಮನವಿ ಮಾಡಿದರು.

ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದ ಭಟ್ಟರಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಇಂದು ಬೆಳಗ್ಗೆ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಮೊದಲೆಲ್ಲ ಪಾಕಿಸ್ತಾನ ಕಾಲು ಕೆರೆಕೊಂಡು ಗಡಿಯಲ್ಲಿ ತಂಟೆ ಮಾಡಿದರೆ ಹಿಂದಿದ್ದ ಸರಕಾರಗಳು ಕಠಿಣ ಕ್ರಮ ಕೈಗೊಳ್ಳುತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಪಾಕ್‍ಗೆ ನಡುಕ ಉಂಟಾಯಿತು.ಸೈನಿಕರಿಗೆ ಬೆಂಬಲ ನೀಡಿದ್ದರಿಂದ ತಕ್ಕ ತಿರುಗೇಟು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುಲ್ವಾಮಾ ದಾಳಿಯಾದ ನಂತರ ಸೈನಿಕರ ಬೆಂಬಲಕ್ಕೆ ಮೋದಿಯವರು ನಿಂತಿದ್ದರಿಂದ ಪಾಕಿಸ್ತಾನದ ಬಾಲಾಕೋಟ್‍ನ ಉಗ್ರರ ನೆಲೆ ಮೇಲೆಯೇ ದಾಳಿ ಮಾಡಿ ಉಗ್ರರನ್ನು ಮಟ್ಟ ಹಾಕಲಾಯಿತು.ಇದು ದೇಶದ ರಕ್ಷಣೆ ವಿಷಯದಲ್ಲಿ ಮೋದಿಯವರು ಕೈಗೊಂಡ ದಿಟ್ಟ ಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.

ಪಾಕಿಸ್ತಾನದ ಮಿತ್ರ ರಾಷ್ಟ್ರಗಳಾದ ಸೌದಿಅರೇಬಿಯಾ, ಚೀನಾ ಸಹ ಪಾಕ್ ಬೆಂಬಲಕ್ಕೆ ನಿಲ್ಲಲಿಲ್ಲ. ಊಳಿದ ಯಾವ ರಾಷ್ಟ್ರಗಳೂ ಪಾಕ್ ಪರ ನಿಲ್ಲಲಿಲ್ಲ. ಪಾಕಿಸ್ತಾನ ಏಕಾಂಗಿಯಾಯಿತು.ಇದು ಮೋದಿಗಿರುವ ಪವರ್ ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ಷಣೆಯಲ್ಲಿ ರಾಜಿಯಿಲ್ಲ:
ಮಾಜಿ ಶಾಸಕ ನಂದೀಶ್ ರೆಡ್ಡಿ ಮಾತನಾಡಿ, ದೇಶದ ರಕ್ಷಣೆ ವಿಷಯದಲ್ಲಿ ಬಿಜೆಪಿ ಎಂದಿಗೂ ರಾಜಿಯಾಗುವುದಿಲ್ಲ. ಕಳೆದ ಐದು ವರ್ಷದ ಬಿಜೆಪಿ ಆಡಳಿತ ಇದಕ್ಕೆ ಸಾಕ್ಷಿಯಾಗಿದೆ.ಕಳೆದ ಬಾರಿ ಬೆಂಬಲಿಸಿದಂತೆ ಈ ಬಾರಿಯೂ ಸದಾನಂದಗೌಡರನ್ನು ಬೆಂಬಲಿಸಬೇಕು.ಸರಳ ಸಜ್ಜನಿಕೆಯ ಸದಾನಂದಗೌಡರು ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ.ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.ಆದ್ದರಿಂದ ಸದಾನಾಂದಗೌಡರನ್ನು ಪುನರಾಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮುಖಂಡರಾದ ಚಿದಾನಂದ್, ಕೇಶವಮೂರ್ತಿ, ವೀರಣ್ಣ ಮತ್ತಿತರರು ಹಾಜರಿದ್ದರು.

ಬೃಹತ್ ಬೈಕ್ ರ್ಯಾಲಿ:
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಮೂಲಕ ಬಿರುಸಿನ ಪ್ರಚಾರ ಕೈಗೊಂಡರು.

ಭಟ್ಟರಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಮೇಡಹಳ್ಳಿ, ರಾಮನ್ ದೇವಸ್ಥಾನ, ವೈಟ್ ಸಿಟಿ ಲೇಔಟ್, ವೀರ್ಗೋನಗರ, ಸೀಗೇಹಳ್ಳಿ, ಸೆಲ್ವರಾಜ್ ಲೇಔಟ್, ಬಸವನಪುರ, ದೇವಸದ್ರ, ವಿಜಿನಾಪುರ, ಕಲ್ಕೆರೆ, ಭೋವಿ ಕಾಲೋನಿ, ಜಯಂತಿಗ್ರಾಮ ಜಂಕ್ಷನ್, ಆನೆಪ್ಪ ಸರ್ಕಲ್, ಕೆ.ಚನ್ನಸಂದ್ರ ಮತ್ತಿತರ ಕಡೆ ಬೃಹತ್ ಬೈಕ್ ರ್ಯಾಲಿ ನಡೆಸಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ತಮಗೆ ಮತ ನೀಡುವಂತೆ ಸದಾನಂದಗೌಡರು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ