ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಏನಾಯಿತು-ಎಚ್.ವಿಶ್ವನಾಥ್

ಬೆಂಗಳೂರು,ಏ.4- ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿರುವ ಬಗ್ಗೆ ಅನುಪಾಲನ ವರದಿಯನ್ನು ಜನರ ಮುಂದಿಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಆಗ್ರಹಿಸಿದರು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಏನಾಯಿತು? ಎಂದು ಪ್ರಶ್ನಿಸಿದರು.

ಕಳೆದ ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಸರ್ಕಾರದ ಮಾಹಿತಿ ಪ್ರಕಾರ 27 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ.

ಬಿಎಸ್‍ಎನ್‍ಎಲ್‍ನಲ್ಲಿ 50 ಸಾವಿರ ಉದ್ಯೋಗ ಕಡಿತವಾಗಿದೆ. ಉದ್ಯೋಗ ಸೃಷ್ಟಿಸುವ ಬದಲು ಉದ್ಯೋಗವನ್ನೇ ಕಡಿತ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಖಾಸಗಿ ಕಂಪನಿಯೊಂದಕ್ಕೆ ಪ್ರಧಾನಿ ರಾಯಭಾರಿಯಾಗಿರುವುದು ಹಿಂದೆಂದೂ ನಡೆದಿಲ್ಲ ಎಂದು ಅವರು ಆರೋಪಿಸಿದರು.

ಯೋಜನಾ ಆಯೋಗವನ್ನು ಮುಚ್ಚಿ ನೀತಿ ಆಯೋಗ ಮಾಡಲಾಗಿದೆ. ಬಾಂಗ್ಲಾದೇಶ ವಿಭಜನೆಯಾದಾಗ ಹಾಗೂ 2ನೇ ಮಹಾಯುದ್ಧದ ನಂತರವೂ ಹೆಚ್ಚು ಸೈನಿಕರು ಶರಣಾಗಿದ್ದರು. ಭಾರತಕ್ಕೆ ಯುದ್ಧ ಹೊಸದಲ್ಲ. ಆದರೆ ಪ್ರಧಾನಿ ನರೇಂದ್ರಮೋದಿ ಅವರು ಪಾಕಿಸ್ತಾನಕ್ಕೆ ಹೋಗಿ ಹೊಡೆದು ಬಂದಂತೆ ಹೇಳುತ್ತಾರೆ.

ದೇಶದ ರಕ್ಷಣೆ ವಿಚಾರವನ್ನು ಏಕೆ ರಾಜಕೀಯಗೊಳಿಸಬೇಕು ಎಂದು ಪ್ರಶ್ನಿಸಿದರು.

ರಫೈಲ್ ಹಗರಣದ ದಾಖಲೆ ಕಳವಾಯಿತು ಎಂದರೆ ಇನ್ಯಾವ ದೇಶ ರಕ್ಷಣೆ ಮಾಡುತ್ತಾರೆ ಎಂದ ವಿಶ್ವನಾಥ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಜೀರೋ ಬ್ಯಾಲೆನ್ಸ್ ಖಾತೆಯನ್ನು ಜನಧನ್ ಆಗಿ ಮಾಡಲಾಗಿದೆ. ದೇಶದಲ್ಲಿ ಶೇ.75ರಷ್ಟು ಸಾಕ್ಷರತೆ ಇದ್ದು, ಜನ ಎಲ್ಲವನ್ನು ಗಮನಿಸುತ್ತಿದ್ದಾರೆ.

ರೈತರಿಗೂ 6 ಸಾವಿರ ರೂ. ಕೊಡುತ್ತಾರಂತೆ ಎಂದು ವ್ಯಂಗ್ಯವಾಡಿದರು.

ಗ್ರಾಮಸಭೆಗಳಲ್ಲೂ ಹಿಂದಿನ ಸಭೆಯ ವರದಿ ಮಂಡಿಸುತ್ತಾರೆ. ಅದನ್ನು ಪ್ರಶ್ನಿಸಿದರೆ ದೇಶದ್ರೋಹಿಗಳಾಗುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ನಕಲಿ ರಾಷ್ಟ್ರೀಯವಾದಿಗಳು, ಭಾರತದ ಪ್ರಭುತ್ವದ ಪರವಾದ ಹೋರಾಟ ಮಾಡುತ್ತಿರುವವರ ನಡುವಿನ ಸಂಘರ್ಷ ನಡೆಯುತ್ತಿದೆ. ಹೊಗಳುವವರು ದೇಶಪ್ರೇಮಿಗಳು, ಪ್ರಶ್ನೆ ಮಾಡಿದವರು ದೇಶದ್ರೋಹಿಗಳು ಎಂಬಂತಾಗಿದೆ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ