ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿಗಳ ಕೆಲಸ ಅಭಿನಂದನಾರ್ಹ-ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್

ಬೆಂಗಳೂರು, ಏ.4- ವಿಪತ್ತುಗಳು ಸಂಭವಿಸಿದಾಗ ತಮ್ಮ ಪ್ರಾಣದ ಹಂಗನ್ನು ತೊರೆದು ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಜೀವ ರಕ್ಷಣೆ ಮಾಡುತ್ತಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಪ್ರಶಂಸಿಸಿದರು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಅಗ್ನಿಶಾಮಕ ಠಾಣಾಧಿಕಾರಿ ಹಾಗೂ ಅಗ್ನಿಶಾಮಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೇವಾ ಮನೋಭಾವದಿಂದ ಜನರ ಆಸ್ತಿ, ಪ್ರಾಣ ರಕ್ಷಿಸುವ ಇವರ ಕೆಲಸ ಅಭಿನಂದನಾರ್ಹ.

ಕೊಡಗಿನ ಪ್ರಕೃತಿ ವಿಕೋಪದಲ್ಲಿ 92 ಅಗ್ನಿಶಾಮಕ ತುರ್ತು ಸೇವೆಗಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಕಾರುಗಳು ಭಸ್ಮವಾದ ಸಂದರ್ಭದಲ್ಲಿ ಹಲವು ಕಾರುಗಳನ್ನು ರಕ್ಷಿಸಿದ್ದಾರೆ. ಧಾರವಾಡದಲ್ಲಿ ಕಟ್ಟಡ ಕುಸಿತದಿಂದ ಅವಶೇಷದಡಿ ಸಿಲುಕಿದ 55 ಜನರನ್ನು ರಕ್ಷಿಸಿ 15 ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಇವರು ಸಾರ್ವಜನಿಕರ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಅಗ್ನಿಶಾಮಕ ಠಾಣಾಧಿಕಾರಿ ಹಾಗೂ ಅಗ್ನಿಶಾಮಕ ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥಸಂಚಲನ ಹಾಗೂ ಗೌರವ ವಂದನೆ ಸಲ್ಲಿಸಿದರು. ಇದೇ ವೇಳೆ ವಿವಿಧ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

2018 ನೇ ಸಾಲಿನಲ್ಲಿ ಮೊದಲನೇ ಹಂತವಾಗಿ 51 ಅಗ್ನಿಶಾಮಕ ಠಾಣಾಧಿಕಾರಿ ಹಾಗೂ 26 ಅಗ್ನಿಶಾಮಕ ಪ್ರಶಿಕ್ಷಣಾರ್ಥಿಗಳಿಗೆ ಅಕಾಡೆಮಿಯಲ್ಲಿ 8 ತಿಂಗಳ ತರಬೇತಿ ನೀಡಲಾಗಿದೆ.

ಒಳಾಡಳಿತ ಇಲಾಖೆಯು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮಹಾನಿರ್ದೇಶಕರಾದ ಎಂ.ಎನ್.ರೆಡ್ಡಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಸುನೀಲ್ ಅಗರ್ವಾಲ್, ಅರಕ್ಷಕ ಉಪ ಮಹಾ ನಿರೀಕ್ಷಕರಾದ ಡಾ. ಬಿ.ಆರ್.ರವಿಕಾಂತೇಗೌಡ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ವಿಪತ್ತು ಸಂದರ್ಭದಲ್ಲಿ ನಡೆಸಲಾದ ಕಾರ್ಯಾಚರಣೆ ಬಿಂಬಿಸುವ ಛಾಯಾಚಿತ್ರ ಪ್ರದರ್ಶನ, ವಿಪತ್ತು ನಿರ್ವಹಣೆ ಸಲಕರಣೆಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ನಡೆಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ