ಪಂಚಾಯ್ತಿ ಸದಸ್ಯರಾಗಲು ಈಶ್ವರಪ್ಪ ನಾಲಾಯಕ್-ಸಚಿವ ಡಿ.ಕೆ.ಶಿವಕುಮಾರ್

ಶಿವಮೊಗ್ಗ, ಏ.3-ಈಶ್ವರಪ್ಪನವರ ಎಲುಬಿಲ್ಲದ ನಾಲಿಗೆಗೆ ಯಡಿಯೂರಪ್ಪ ಅವರು ಬ್ರೇಕ್ ಹಾಕಬೇಕು ಎಂದು ಹೇಳಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ನಾಯಕರ ಹೇಳಿಕೆ ಅವರ ಸಂಸ್ಕøತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಧುಬಂಗಾರಪ್ಪ ಅವರ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ನೀಡಿರುವ ಹೇಳಿಕೆಗಳು ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಪಂಚಾಯ್ತಿ ಸದಸ್ಯರಾಗಲು ಈಶ್ವರಪ್ಪ ನಾಲಾಯಕ್.ನೀಚ ನಾಲಿಗೆ ಯನ್ನು ಬಾಯಿಗೆ ಬಂದಂತೆ ಬಳಸಿದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ದೇಶ ಕಾಯುವುದು ಕಾಂಗ್ರೆಸ್ಸಿಗರ ರಕ್ತದಲ್ಲೇ ಬಂದಿದೆ. 60 ವರ್ಷ ಆಡಳಿತ ನಡೆಸಿರುವ ನಮಗೆ ಬಿಜೆಪಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ. ಈವರೆಗೂ ಸಾಕಷ್ಟು ಯೋಜನೆಗಳನ್ನು ರೂಪಿಸಿ ಜನರ ಬದುಕನ್ನು ಹಸಿರಾಗಿಸಿದ್ದೇವೆ. ಈ ಲೋಕಸಭೆ ಚುನಾವಣೆಗೆ ಮಾಜಿ ಪ್ರಧಾನಿ ಮನ್‍ಮೋಹನ್‍ಸಿಂಗ್, ಕೇಂದ್ರದ ಮಾಜಿ ಆರ್ಥಿಕ ಸಚಿವ ಪಿ.ಚಿದಂಬರಂ ಚರ್ಚಿಸಿ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ.ಯುವಪೀಳಿಗೆಗೆ ಪ್ರಣಾಳಿಕೆಯಲ್ಲಿ ಸಾಕಷ್ಟು ಒಳ್ಳೆಯ ಅಂಶಗಳಿವೆ ಎಂದರು.

ಬಿಜೆಪಿಯವರು ಅಚ್ಚೇ ದಿನ್ ಎನ್ನುತ್ತಾರೆ, ಆದರೆ ಅಚ್ಚೇ ದಿನ್ ಯಾರಿಗೆ ಬಂದಿದೆ ಗೊತ್ತಿಲ್ಲ. ಪಕೋಡಾ ಮಾರಿ ಸಂಪಾದಿಸಿ ಎಂದು ಸಲಹೆ ನೀಡುತ್ತಾರೆ.ಬಡವರು ಬದುಕಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.ದೇಶ ದಿವಾಳಿಯಾಗುವ ಸ್ಥಿತಿ ಬಂದಿದೆ.ರಾಜಕಾರಣಕ್ಕಾಗಿ ಭದ್ರತೆಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

ಮಂಡ್ಯ ಲೋಕಸಭೆಯಲ್ಲಿ ಕೆಲವರು ಹದ್ದುಮೀರಿದ ಹೇಳಿಕೆಗಳನ್ನು ನೀಡುತ್ತಿದ್ದಾರೆ.ಇದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಜನ ತಕ್ಕ ಉತ್ತರ ನೀಡುತ್ತಾರೆ.

ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬುದು ಪ್ರಬಲವಾದ ಅಸ್ತ್ರ.ಅದನ್ನು ಸರಿಯಾಗಿ ಬಳಸುತ್ತಾರೆ.ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ