ರಾಹುಲ್ ಗಾಂಧಿ ಪ್ರಧಾನಿಯಾಗುವುದು ತಿರುಕನ ಕನಸು-ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

ಬೆಳಗಾವಿ, ಏ.1- ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.ಅದು ತಿರುಕನ ಕನಸಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಹುಲ್ ಗಾಂಧಿ ತಾನು ಕಾಂಗ್ರೆಸ್‍ನ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಎನ್ನುವುದನ್ನು ಮರೆತು 1,800 ಕೋಟಿ ರೂ. ಹಣವನ್ನು ಅಡ್ವಾಣಿ ಹಾಗೂ ಇತರೆ ಮುಖಂಡರಿಗೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಈಗಾಗಲೇ ಐಟಿ ಅಧಿಕಾರಿಗಳು ಸ್ಪಷ್ಟ ಮಾಹಿತಿ ತಿಳಿಸಿದರೂ ಪದೇ ಪದೇ ಉಚ್ಚರಿಸುತ್ತಿದ್ದಾನೆ. ಅವರು ದಾಖಲೆ ನೀಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯನವರ ಮನೆಗೆ ಸ್ವತಃ ಕುಮಾರಸ್ವಾಮಿ ಅವರ ಪತ್ನಿ ಹೋಗಿ ಜೆಡಿಎಸ್ ಅಭ್ಯರ್ಥಿ ಹಾಗೂ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಬೆಂಬಲಿಸುವಂತೆ ಬೇಡಿಕೊಂಡರು.

ತುಮಕೂರು, ಹಾಸನ ಹಾಗೂ ಮಂಡ್ಯ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗಿ ಸಿದ್ದರಾಮಯ್ಯ ಬರಲೇ ಇಲ್ಲ. ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ ರಾಜ್ಯದಲ್ಲಿ ಮೈತ್ರಿ ಸರಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಇದೇ 3ರಂದು ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಅಣ್ಣಾ ಸಾಹೇಬ ಜೊಲ್ಲೆ, 4ರಂದು ಬೆಳಗಾವಿಯಿಂದ ಸುರೇಶ್ ಅಂಗಡಿ ನಾಮಪತ್ರ ಸಲ್ಲಿಸಲಿದ್ದಾರೆ.

ಎರಡೂ ಕಡೆ ಬುಧವಾರ ಮತ್ತು ಗುರುವಾರ ಸಾರ್ವಜನಿಕ ಸಭೆ ನಡೆಸಲಿದ್ದೇವೆ. ಈ ಸಂದರ್ಭದಲ್ಲಿ ರಮೇಶ ಕತ್ತಿ, ಉಮೇಶ ಕತ್ತಿ ಉಪಸ್ಥಿತರಿರುವರು.ಚಿಕ್ಕೋಡಿ ಹಾಗೂ ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿ ಸುಮಾರು 24 ಕ್ಷೇತ್ರ ಗೆದ್ದು ಮೊದಿಗೆ ಕೊಡುಗೆ ನೀಡಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ಮಹಾರಾಷ್ಟ್ರ ನಾಯಕರೊಂದಿಗೆ ಮಾತನಾಡಿದ್ದೇವೆ. ಕೊಯ್ನಾ ನೀರು ಬಿಡುವಂತೆ ಮನವಿ ಮಾಡಿಕೊಂಡಿದ್ದೇವೆ.ಸಹಜವಾಗಿ ರಮೇಶ್ ಕತ್ತಿ ಆಕಾಂಕ್ಷಿಗಳು. ಪ್ರಧಾನಿ ಮೋದಿ ಅವರ ಇನ್ನೊಮ್ಮೆ ಅಧಿಕಾರ ಹಿಡಿಯಲು ಎಲ್ಲರೂ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಮತ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಮೇಶ್ ಕತ್ತಿ ಅವರಿಗೆ ಸೂಕ್ತ ಸಂದರ್ಭದಲ್ಲಿ ಅವರಿಗೆ ಬಿಜೆಪಿಯಲ್ಲಿ ಸ್ಥಾನಮಾನ ಸಿಗಲಿದೆ ಕಾದು ನೋಡಿ ಎಂದರು.

ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ, ಲೋಕಸಭೆ ಚುನಾವಣೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಯಾವುದೇ ಸ್ಥಾನಮಾನ ನೀಡುವ ಆಶ್ವಾಸನೆ ನೀಡಿಲ್ಲ.

ಲೋಕಸಭೆ ಎನ್ನುವುದು ದೇಶ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪದಲ್ಲಿಟ್ಟುಕೊಂಡು ಸಾಮಾನ್ಯ ಬಿಜೆಪಿ ಕಾರ್ಯಕರ್ತನಾಗಿ ಮುಂದೆವರೆಯುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‍ನಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ. ಅವರು ಸಹಜವಾಗಿ ಕೇಳಿದ್ದಾರೆ.ಆದರೆ, ಕಾಂಗ್ರೆಸ್‍ನಿಂದ ಪಕ್ಷ ಸೇರ್ಪಡೆ ಕುರಿತಂತೆ ಯಾವುದೇ ಬೇಡಿಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕರಾದ ಮಹಾದೇವಪ್ಪ ಯಾದವಾಡ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಮಹಾಂತೇಶ ಕವಟಗಿಮಠ, ಸಂಸದ ಸುರೇಶ್ ಅಂಗಡಿ, ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ