ಕುಮಾರಸ್ವಾಮಿ ಒಬ್ಬ ಆಯೋಗ್ಯ ಸಿಎಂ-ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ

ಗಂಗಾವತಿ,ಏ.1- ಆದಾಯ ತೆರಿಗೆ ಇಲಾಖೆಯ ಗೌಪ್ಯತೆಯನ್ನು ಕಾಪಾಡದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಬ್ಬ ಅಯೋಗ್ಯ ಸಿಎಂ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿದ ಕುಮಾರಸ್ವಾಮಿ ಸ್ವಾಯತ್ತ ಸಂಸ್ಥೆಗಳ ಕಾರ್ಯಾಚರಣೆ ಗೌಪ್ಯತೆಯನ್ನು ಕಾಪಾಡಬೇಕಿತ್ತು. ಆದರೆ ದಾಳಿಗೂ ಮುನ್ನವೇ ಬಹಿರಂಗಪಡಿಸಿ ತಾನೊಬ್ಬ ಅಯೋಗ್ಯ ಸಿಎಂ ಎಂಬುದನ್ನು ರುಜುವಾತು ಮಾಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಒಂದು ವೇಳೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ಅವರಿಗೆ ಮುಂಚಿತವಾಗಿ ತಿಳಿದಿದ್ದರೆ ಅದರ ಗೌಪ್ಯತೆಯನ್ನು ಬಹಿರಂಗಪಡಿಸಬಾರದಿತ್ತು.ದಾಳಿಗೂ ಮುನ್ನವೇ ಅವರಿಗೆ ಮಾಹಿತಿ ಇತ್ತು ಎನ್ನುವುದಾದರೆ ದು ಅವರಿಗೆ ಹೇಗೆ ತಿಳಿಯಿತು ಎಂಬುದನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದರು.

ರಾಜ್ಯದ ಅಭಿವೃದ್ದಿಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ವಾಸ್ತವವಾಗಿ ಇವರು ಸ್ವಾರ್ಥಕ್ಕಾಗಿ ಹಾಗೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಎಷ್ಟರ ಮಟ್ಟಿಗೆ ಒಗ್ಗಟ್ಟಾಗಿದ್ದಾರೆ ಎಂಬುದು ಸಾಬೀತಾಗಿದೆ.ಅವರವರೇ ಬಡಿದುಕೊಂಡು ತಮ್ಮ ಅಭ್ಯರ್ಥಿಗಳನ್ನು ಸೋಲಿಸಲಿದ್ದಾರೆ.ಎರಡೂ ಪಕ್ಷಗಳ ಬಿಕ್ಕಟ್ಟು ನಮಗೆ ಅನುಕೂಲವಾಗಲಿದೆ ಎಂದರು.

ಸಿದ್ದರಾಮಯ್ಯ ಜಾತಿವಾದಿ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಮಹಾನ್ ಜಾತಿವಾದಿ. ಅವರ ರಕ್ತದಲ್ಲೇ ಜಾತಿವಾದ ಅರಿಯುತ್ತಿದೆ.ಆದರೆ ಹೊರಗೆ ಮಾತ್ರ ತಾನು ಮಹಾನ್ ಜಾತ್ಯತೀತ ನಾಯಕನಂತೆ ಪೋಸ್ ಕೊಡುತ್ತಾರೆ. ಅವರಂತಹ ಜಾತಿವಾದಿಯನ್ನು ನಾನು ಈವರೆಗೂ ನೋಡೇ ಇಲ್ಲ ಎಂದು ಟೀಕಿಸಿದರು.

ಜಾತಿ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತುವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ. ಸಮ್ಮಿಶ್ರ ಸರ್ಕಾರ ತನ್ನ ನಿಯಂತ್ರಣದಲ್ಲಿ ಇರಬೇಕು ಎಂಬ ಕಾರಣಕ್ಕಾಗಿ ತಮ್ಮ ಬೆಂಬಲಿಗರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಾರೆ. ಮತ್ತೊಂದೆಡೆ ಬಿಕ್ಕಟ್ಟನ್ನು ಪರಿಹರಿಸಲು ಅವರೇ ಮುಂದಾಗುತ್ತಾರೆ.ದೋಸ್ತಿ ಸರ್ಕಾರ ಪತನವಾದರೆ ಅದರ ಶ್ರೇಯಸ್ಸು ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಕುಹುಕವಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ