ಗಾಂಧಿನಗರ: ಗುಜರಾತ್ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಾಮಮತ್ರ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಜನರು 70 ವರ್ಷಗಳಿಂದ ಉತ್ತಮ ನಾಯಕನಿಗಾಗಿ ಕಾಯುತ್ತಿದ್ದರು. ಅವರ ಬೇಡಿಕೆಯಂತೆ ಉತ್ತಮ ನಾಯಕ ಸಿಕ್ಕಿದ್ದಾನೆ. ದೇಶವನ್ನು ಯಾರು ಮುನ್ನಡೆಸಬೇಕು ಎನ್ನುವುದಕ್ಕಾಗಿ ಮಾತ್ರ ಈ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂದು ಹೇಳಿದರು.
ನಾನು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೇನೆ. ದೇಶದಲ್ಲಿ ಪ್ರಧಾನಿ ಮೋದಿಯವರನ್ನು ಜನರು ಜಪಿಸುತ್ತಿದ್ದಾರೆ. ಹಿಮಾಚಲದಿಂದ ಕನ್ಯಾಕುಮಾರಿವರೆಗೆ ಹಾಗೂ ಕಾಂಪುರ್ ದಿಂದ ಗಾಂಧಿನಗರವರೆಗೂ ಮೋದಿ, ಮೋದಿ ಎನ್ನುವ ಕೂಗು ಮಾತ್ರ ಕೇಳುತ್ತಿದೆ ಎಂದರು.
ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ನನಗೆ ಸಿಕ್ಕಿದೆ. ಇದು ನನ್ನ ಅದೃಷ್ಟವಾಗಿದೆ. ಈ ಕ್ಷೇತ್ರದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪುರುಷೋತ್ತಮ್ ಗಣೇಶ್ ಮಾಳ್ವಂಕರ್ ಕೂಡ ಸ್ಪರ್ಧಿಸಿದ್ದರು ಎಂದು ಶಾ ನೆನಪಿಸಿಕೊಂಡರು.
ಬಳಿಕ ಗಾಂಧಿನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದ ಅಮಿತ್ ಶಾ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಸಾಥ್ ಮೊದಲಾದವರು ಸಾಥ್ ನೀಡಿದರು.