ನಾಮಪತ್ರ ವಾಪಸ್ ಪಡೆದ ಮುದ್ದಹನುಮೇಗೌಡ

ತುಮಕೂರು: ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಕ್ಕೆ ತೀವ್ರ ಅಸಮಾಧಾನಗೊಂಡು ಮೈತ್ರಿ ಸರ್ಕಾರದ ವಿರುದ್ಧವೇ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್​ ಹಾಲಿ ಸಂಸದ ಮುದ್ದಹನುಮೇಗೌಡ ಕೊನೆಗೂ ನಾಮಪತ್ರವಾಪಸ್ ಪಡೆದಿದ್ದಾರೆ.

ಮುದ್ದಹನುಮೇಗೌಡರು ತಮ್ಮ ಆಪ್ತರಾಗಿರುವ ರಾಯಸಂದ್ರ ರವಿಕುಮಾರ್ ಅವರಿಂದ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾದ್ದರಿಂದ ಡಿಸಿಎಂ ಪರಮೇಶ್ವರ್​ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರು ಇಂದು ಮುದ್ದಹನುಮೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿ ನಾಮಪತ್ರ ವಾಪಸು ಪಡೆಯುವಂತೆ ಮನವೊಲಿಸಿದ್ದರು.

ಈ ವೇಳೆ ಮಾತನಾಡಿದ್ದ ಅವರು ಬೆಂಬಲಿಗರ ಸಭೆಯ ಬಳಿಕ ತಮ್ಮ ನಿಲುವನ್ನು ತಿಳಿಸುವುದಾಗಿ ಹೇಳಿದ್ದರು. ಕೊನೆಗೂ ತಮ್ಮ ನಿಲುವನ್ನು ಬದಲಿಸಿರುವ ಮುದ್ದಹನುಮೇಗೌಡರು ನಾಮಪತ್ರ ಹಿಂಪಡೆದಿದ್ದಾರೆ. ಈ ಮೂಲಕ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್​.ಡಿ.ದೇವೇಗೌಡರಿಗೆ ಎದುರಾಗಿದ್ದ ತೊಡಕೊಂದು ನಿವಾರಣೆ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ