ತುಮಕೂರು: ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಕ್ಕೆ ತೀವ್ರ ಅಸಮಾಧಾನಗೊಂಡು ಮೈತ್ರಿ ಸರ್ಕಾರದ ವಿರುದ್ಧವೇ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಹಾಲಿ ಸಂಸದ ಮುದ್ದಹನುಮೇಗೌಡ ಕೊನೆಗೂ ನಾಮಪತ್ರವಾಪಸ್ ಪಡೆದಿದ್ದಾರೆ.
ಮುದ್ದಹನುಮೇಗೌಡರು ತಮ್ಮ ಆಪ್ತರಾಗಿರುವ ರಾಯಸಂದ್ರ ರವಿಕುಮಾರ್ ಅವರಿಂದ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾದ್ದರಿಂದ ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇಂದು ಮುದ್ದಹನುಮೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿ ನಾಮಪತ್ರ ವಾಪಸು ಪಡೆಯುವಂತೆ ಮನವೊಲಿಸಿದ್ದರು.
ಈ ವೇಳೆ ಮಾತನಾಡಿದ್ದ ಅವರು ಬೆಂಬಲಿಗರ ಸಭೆಯ ಬಳಿಕ ತಮ್ಮ ನಿಲುವನ್ನು ತಿಳಿಸುವುದಾಗಿ ಹೇಳಿದ್ದರು. ಕೊನೆಗೂ ತಮ್ಮ ನಿಲುವನ್ನು ಬದಲಿಸಿರುವ ಮುದ್ದಹನುಮೇಗೌಡರು ನಾಮಪತ್ರ ಹಿಂಪಡೆದಿದ್ದಾರೆ. ಈ ಮೂಲಕ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಎದುರಾಗಿದ್ದ ತೊಡಕೊಂದು ನಿವಾರಣೆ ಆಗಿದೆ.