ಬೆಂಗಳೂರ,ಮಾ.29- ಅತ್ಯಂತ ಜನನಿಬಿಡ ಪ್ರದೇಶವಾದ ಇತಿಹಾಸ ಪ್ರಸಿದ್ದ ನಗರದ ಕೃಷ್ಣರಾಜ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳು ಸದ್ದು ಮಾಡಿದವು.
ಪಾದಚಾರಿ ರಸ್ತೆ, ಪಾರ್ಕಿಂಗ್ ಸ್ಥಳ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿ, ಮಳಿಗೆಗಳನ್ನು ಇಂದು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ವ್ಯಾಪಾರಸ್ಥರ ತೀವ್ರ ವಿರೋಧದ ನಡುವೆಯೂ ಅಂಗಡಿ, ಮಳಿಗೆಗಳನ್ನು ನೆಲಸಮಗೊಳಿಸಿದರು.
ಸುಮಾರು 15ಕ್ಕೂ ಹೆಚ್ಚು ಜೆಸಿಬಿಗಳು ಬೆಳಗ್ಗಿನಿಂದಲೇ ಅನಧಿಕೃತ ಅಂಗಡಿಗಳ ನೆಲಸಮ ಕಾರ್ಯದಲ್ಲಿ ತೊಡಗಿದವು. ಕೆ.ಆರ್.ಮಾರುಕಟ್ಟೆಯ ಕೆಳಹಂತಸ್ತಿನಲ್ಲಿ ಹಲವಾರು ಅನಧಿಕೃತ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು.
ಅದೇ ರೀತಿ ಫ್ಲೈಓವರ್ ಕೆಳಗೆ ಮತ್ತು ಪಾದಚಾರಿ ಮಾರ್ಗಗಳು, ಪಾರ್ಕಿಂಗ್ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ನಿರ್ಮಿಸಿಕೊಂಡು ಬಹಳಷ್ಟು ಮಂದಿ ವ್ಯಾಪಾರ ಮಾಡುತ್ತಿದ್ದರು.
ತೆರವು ಕಾರ್ಯದಲ್ಲಿ ಸುಮಾರು 500 ಮಂದಿ ಬಿಬಿಎಂಪಿ ಕಾರ್ಮಿಕರು ಭಾಗವಹಿಸಿದ್ದರು. ಕಟ್ಟಡದ ತ್ಯಾಜ್ಯ ಹಾಗೂ ನಿರ್ಮಾಣದ ಭಾಗಗಳನ್ನು ಸಾಗಿಸಲು 15 ಲಾರಿಗಳು, ಟ್ರ್ಯಾಕ್ಟರ್ಗಳನ್ನು ಬಳಕೆ ಮಾಡಿಕೊಳ್ಳಲಾಯಿತು.
ಕಾರ್ಯಾಚರಣೆ ವೇಳೆ ಹಲವಾರು ವ್ಯಾಪಾರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪಾಲಿಕೆಯ ಧೋರಣೆಯನ್ನು ಖಂಡಿಸಿದರು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅನಧಿಕೃತ ಮಳಿಗೆಗಳನ್ನು ನೆಲಸಮ ಮಾಡಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫ್ರಾಜ್ ಖಾನ್ ಅವರು, ಕೆ.ಆರ್.ಮಾರುಕಟ್ಟೆಯ ಒಳಭಾಗ ಮತ್ತು ಹೊರಭಾಗದಲ್ಲಿ ಜಾಗವನ್ನು ಒತ್ತುವರಿ ಮಾಡಲಾಗಿದೆ. ಹೊಸ ಮಾರ್ಕೆಟ್ ಕಾಂಪ್ಲೆಕ್ಸ್ ಒಳಭಾಗದಲ್ಲಿ 1800ಕ್ಕೂ ಹೆಚ್ಚು ಅಂಗಡಿಗಳಿವೆ. ಇದರಲ್ಲಿ ಶೇ.50ರಷ್ಟು ಮಂದಿ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಜಾಗವನ್ನು ತೆರವು ಮಾಡುತ್ತಿದ್ದೇವೆ ಎಂದರು.
ಮಾರುಕಟ್ಟೆ ಹೊರಭಾಗದಲ್ಲಿ ಬಿಬಿಎಂಪಿ ಹಾಗೂ ಖಾಸಗಿ ವಾಹನಗಳು ಬಂದು ಹೋದರೂ ತೊಂದರೆಯಾಗುತ್ತಿತ್ತು. ಬೀದಿಬದಿ ವ್ಯಾಪಾರಿಗಳು ಹೊರಭಾಗದಲ್ಲಿ ಶೇ.60ರಿಂದ 70ರಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಕಾಂಪ್ಲೆಕ್ಸ್ನ ನೆಲಭಾಗದಲ್ಲಿ ಪಾರ್ಕಿಂಗ್ ಸ್ಥಳ ಒತ್ತುವರಿಯಾಗಿದೆ. ಎಲ್ಲವನ್ನು ತೆರವುಗೊಳಿಸಲಾಗುತ್ತದೆ ಅಲ್ಲದೆ ಕಸ ಸಂಗ್ರಹಣೆಯನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.