ಲೋಕಸಭಾ ಚುನಾವಣೆಯಲ್ಲೂ ಮುಂದುವರೆದ ವಂಶಪಾರಂಪರ್ಯ ರಾಜಕಾರಣ

ಬೆಂಗಳೂರು,ಮಾ.29- ಕೆಲ ದಿನಗಳ ಹಿಂದೆ ಭಾರೀ ಸದ್ದು ಮಾಡಿದ್ದ ಕುಟುಂಬ ರಾಜಕಾರಣ ಇದೀಗ ಲೋಕಸಭೆ ಚುನಾವಣೆಯಲ್ಲಿ ಪುತ್ರರತ್ನರಿಗೆ ಮಣೆ ಹಾಕುವ ಮೂಲಕ ರಾಜಕೀಯದಲ್ಲಿ ವಂಶವೃಕ್ಷ ಬೆಳೆಸುವ ಪರಂಪರೆ ಮುಂದುವರೆದಿದೆ.

ರಾಜಕೀಯದಲ್ಲಿ ವಂಶಪಾರಂಪರ್ಯಕ್ಕೆ ಅವಕಾಶ ಇರಬಾರದೆಂದು ಹೇಳುತ್ತಾರಾದರೂ ಅಂತಿಮ ದಿನಗಳಲ್ಲಿ ಬೆಂಬಲಿಗರ ಒತ್ತಡ ಅಥವಾ ಗೆಲ್ಲುವ ಮುಖಗಳಿಗೆ ಮಣೆ ಹಾಕಬೇಕೆಂಬ ಕಾರಣಕ್ಕಾಗಿ ಅವರ ಕುಟುಂಬದವರಿಗೆ ಟಿಕೆಟ್ ನೀಡುವ ಪರಂಪರೆ ಈ ಚುನಾವಣೆಯಲ್ಲೂ ಕಾಣುತ್ತದೆ.

ಏ.18 ಮತ್ತು 23ರಂದು ನಡೆಯಲಿರುವ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಈ ಬಾರಿ ತಾತ, ಮಕ್ಕಳು, ಮೊಮ್ಮಕ್ಕಳು, ರಕ್ತಸಂಬಂಧಿಗಳೇ ಅನೇಕ ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ.

ನಾವೇನೂ ಹಿಂಬಾಗಿಲು ಮೂಲಕ ರಾಜಕಾರಣ ಮಾಡಿಲ್ಲ. ಜನರಿಂದ ನೇರವಾಗಿ ಆಯ್ಕೆಯಾಗಿದ್ದೇವೆ ಎಂದು ಕೆಲವರು ತಮ್ಮ ಕುಟುಂಬದವರನ್ನು ಸಮರ್ಥಿಸಿಕೊಳ್ಳುತ್ತಾರಾದರೂ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಇರಬಾರದೆಂಬುದು ಬಹುತೇಕರ ಒತ್ತಾಸೆಯಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದ್ದು,ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ (ಹಾಸನ), ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‍ಕುಮಾರಸ್ವಾಮಿ(ಮಂಡ್ಯ) ಸ್ಪರ್ಧಿಸಲು ಮುಂದಾಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಕಾರ್ಯಕರ್ತರ ಒತ್ತಾಸೆ ಮೇರೆಗೆ ಇಬ್ಬರನ್ನು ಕಣಕ್ಕಿಳಿಸಿದ್ದೇವೆ ಎಂದು ಜೆಡಿಎಸ್ ಸಮರ್ಥಿಸಿಕೊಂಡಿತ್ತು.ಆದರೆ ಇಬ್ಬರು ಮೊಮ್ಮಕ್ಕಳಿಗೆ ಟಿಕೆಟ್ ನೀಡಿ ದಳಪತಿಗಳು ಮುಜುರಕ್ಕೆ ಸಿಲುಕಿಸಿದ್ದು ಸುಳ್ಳಲ್ಲ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನದ ಲೋಕಸಭಾ ಸದಸ್ಯರು. ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾಗುವುದರ ಜೊತೆಗೆ ರಾಜ್ಯದ ಮುಖ್ಯಮಂತ್ರಿಯೂ ಹೌದು.ದೇವೇಗೌಡರ ಮತ್ತೊಬ್ಬ ಪುತ್ರ ಎಚ್.ಡಿ.ರೇವಣ್ಣ ಹೊಳೆನರಸೀಪುರದ ಶಾಸಕರಾಗಿರುವುದರ ಜೊತೆಗೆ ಲೋಕೋಪಯೋಗಿ ಸಚಿವರು.

ಕುಮಾರಸ್ವಾಮಿ ಪತ್ನಿ ಅನಿತಾಕುಮಾರಸ್ವಾಮಿ ರಾಮನಗರದ ಶಾಸಕರು.ಇದೀಗ ಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೌಡರ ಮೂರನೇ ತಲೆಮಾರು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದೆ.

ಕುಟುಂಬ ರಾಜಕಾರಣವನ್ನು ವಿರೋಧಿಸಿದ್ದ ಬಿಜೆಪಿ ಕಾಲ ಬದಲಾದಂತೆ ಪುತ್ರರು ಮತ್ತು ರಕ್ತ ಸಂಬಂಧಿಗಳಿಗೆ ಮಣೆ ಹಾಕಿದ್ದು ಅಚ್ಚರಿಗಳಲ್ಲೊಂದು. ನಮ್ಮ ಪಕ್ಷ ಇತರರಿಗಿಂತಲೂ ಭಿನ್ನ ಎಂದು ಹೇಳುತ್ತಿದ್ದ ಬಿಜೆಪಿ ಈ ಬಾರಿ ತಮ್ಮ ಕುಟುಂಬದ ಅನೇಕರಿಗೆ ಟಿಕೆಟ್ ನೀಡಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರನನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ. ಮಾಜಿ ಸಚಿವ ಹಾಗೂ ಹಾನಗಲ್ ಕ್ಷೇತ್ರದ ಶಾಸಕ ಸಿ.ಎಂ.ಉದಾಸಿ ಪುತ್ರ ಶಿವಕುಮಾರ್ ಉದಾಸಿ , ಹಾವೇರಿಯಿಂದ ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕ ರವಿಸುಬ್ರಹ್ಮಣ್ಯ ಸಹೋದರನ ಪುತ್ರ ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ.

ತುಮಕೂರುನಗರ ಶಾಸಕ ಜ್ಯೋತಿಗಣೇಶ್ ಅವರ ತಂದೆ ಜಿ.ಎಚ್.ಬಸವರಾಜ್ ಇದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಇನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನೀಡುವಂತೆ ಲಾಭಿ ಆರಂಭಿಸಿದ್ದಾರೆ.

ವಂಶಪಾರಂಪರ್ಯ ರಾಜಕಾರಣಕ್ಕೆ ಕಾಂಗ್ರೆಸ್ ಕೂಡ ಹೊರತಾಗಿಲ್ಲ. ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸ್ಪರ್ಧಿಸಿದ್ದಾರೆ.

ಕಾಂಗ್ರೆಸ್‍ನಲ್ಲಿ ಸೋಲಿಲ್ಲದ ಸರದಾರನೆಂದೇ ಗುರುತಿಸಿಕೊಂಡಿರುವ ಎಂ.ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಮೀಸಲು ಕ್ಷೇತ್ರದಿಂದ ಮತ್ತೊಮ್ಮೆ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ.

ಒಂದೆಡೆ ಅಪ್ಪ ಲೋಕಸಭಾ ಕಣದಲ್ಲಿದ್ದರೆ, ಅವರ ಪುತ್ರ ಪ್ರಿಯಾಂಕ ಖರ್ಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಹೀಗೆ ರಾಜಕಾರಣದಲ್ಲಿ ಎಷ್ಟೇ ಟೀಕೆ, ಟಿಪ್ಪಣಿಗಳು ಬಂದರೂ ಗ್ರಾಮಪಂಚಾಯ್ತಿಯಿಂದ ಹಿಡಿದು ಲೋಕಸಭೆವರೆಗೂ ವಂಶಪಾರಂಪರ್ಯ ಅನಾದಿ ಕಾಲದಿಂದಲೂ ಮುಂದುವರೆದಿದೆ.

ಎಲ್ಲೆಲ್ಲಿ ಸ್ಪರ್ಧೆ:
ಎಚ್.ಡಿ.ದೇವೇಗೌಡ-ತುಮಕೂರು
ಪ್ರಜ್ವಲ್ ರೇವಣ್ಣ- ಹಾಸನ
ನಿಖಿಲ್ ಕುಮಾರಸ್ವಾಮಿ- ಮಂಡ್ಯ
ಬಿ.ವೈ.ರಾಘವೇಂದ್ರ -ಶಿವಮೊಗ್ಗ
ಡಿ.ಕೆ.ಸುರೇಶ್-ಬೆಂಗಳೂರು ಗ್ರಾಮಾಂತರ
ಜಿ.ಎಚ್.ಬಸವರಾಜು- ತುಮಕೂರು
ಶಿವಕುಮಾರ್ ಉದಾಸಿ-ಹಾವೇರಿ
ತೇಜಸ್ವಿ ಸೂರ್ಯ(ಶಾಸಕ ರವಿಸುಬ್ರಹ್ಮಣ್ಯಸೋದರನ ಪುತ್ರ)-ಬೆಂಗಳೂರು ದಕ್ಷಿಣ
ರಮೇಶ್ ಕತ್ತಿ-ಚಿಕ್ಕೋಡಿ(ಸಂಭಾವ್ಯ ಅಭ್ಯರ್ಥಿ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ