ಏ.8ರಂದು ಸಾಂಸ್ಕøತಿಕ ನಗರ ಮೈಸೂರಿಗೆ ಪ್ರಧಾನಿ ಮೋದಿ

ಬೆಂಗಳೂರು,ಮಾ.29- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏ.8ರಂದು ಸಾಂಸ್ಕøತಿಕ ನಗರ ಮೈಸೂರಿಗೆ ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.

ಅಂದು ಮಧ್ಯಾಹ್ನ ಮೈಸೂರು-ಕೊಡುಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಪರ ಮೋದಿ ಸಮಾವೇಶ ನಡೆಸಿ ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯಕ್ಕೆ ನರೇಂದ್ರ ಮೋದಿಯವರ ಅಧಿಕೃತ ಭೇಟಿ ಇದಾಗಿದ್ದು, ಮೈಸೂರಿನ ನಂತರ ಅದೇ ದಿನ ಸಂಜೆ ಮೋದಿ ಕೋಟೆನಾಡು ಚಿತ್ರದುರ್ಗದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ.

ರಾಜ್ಯದಲ್ಲಿ ಒಟ್ಟು ಏಳು ಕಡೆ ಬಿಜೆಪಿ ಪರ ಪ್ರಚಾರ ನಡೆಸಲಿರುವ ನರೇಂದ್ರ ಮೋದಿ, ಕೆಲವು ಸಂದರ್ಭದಲ್ಲಿ ಕೆಲವು ಕಡೆ ಒಂದೇ ಸ್ಥಳದಲ್ಲಿ ಎರಡರಿಂದ ಮೂರು ಸುತ್ತಿನ ಪ್ರಚಾರವನ್ನು ನಡೆಸಲಿದ್ದಾರೆ. 8ರ ನಂತರ ವಿಜಾಪುರ, ಮಂಗಳೂರು, ಬೆಂಗಳೂರು, ತುಮಕೂರು ಸೇರಿದಂತೆ 7 ಕಡೆ ಪ್ರಚಾರ ನಡೆಸಿ ಈ ಬಾರಿ ಕರ್ನಾಟಕದಿಂದ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡುವಂತೆ ಮತದಾರರಿಗೆ ಮನವಿ ಮಾಡಲಿದ್ದಾರೆ.

ಈ ಹಿಂದೆ ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ನರೇಂದ್ರ ಮೋದಿ ಅವರು ಹುಬ್ಬಳ್ಳಿಮತ್ತು ಕಲಬುರಗಿಯಲ್ಲಿ ಬಹಿರಂಗ ಪ್ರಚಾರ ನಡೆಸುವ ಮೂಲಕ ಲೋಕಸಭೆ ಚುನಾವಣೆಗೆ ಕಳಹೆ ಮೊಳಗಿಸಿದ್ದರು.

ರಾಜ್ಯದಲ್ಲಿ 10ರಿಂದ 12 ಬಹಿರಂಗ ಸಭೆಗಳನ್ನು ನಡೆಸುವಂತೆ ರಾಜ್ಯ ಬಿಜೆಪಿ ಘಟಕ ಕೇಂದ್ರ ನಾಯಕರಿಗೆ ಮನವಿ ಮಾಡಿತ್ತು. ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ ಮೋದಿ ಅವರು ರಾಜ್ಯದಲ್ಲಿ ಹೆಚ್ಚು ಬಹಿರಂಗ ಸಭೆಗಳನ್ನು ನಡೆಸಿದ್ದರ ಪರಿಣಾಮ 104 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.

ರಾಜ್ಯದಲ್ಲಿ ಮೋದಿ ಅವರು ಪ್ರಸ್ತುತ ಹೆಚ್ಚು ಸಮಾವೇಶಗಳನ್ನು ನಡೆಸಿದರೆ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗುತ್ತದೆ ಎಂದು ರಾಜ್ಯನಾಯಕರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ