ಬೆಂಗಳೂರು, ಮಾ.28ನಗರದ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಉತ್ತರ ಕ್ಷೇತ್ರದ ಪ್ರಚಾರಪೂರ್ವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಜಂಟಿ ಸಭೆ ನಂತರ ಮಾತನಾಡಿದ ಸಚಿವ ಕೃಷ್ಣಭೈರೇಗೌಡ ಅವರು, ದೇವೇಗೌಡರು ಹಾಗೂ ಕಾಂಗ್ರೆಸ್ ನಾಯಕರ ಸಲಹೆ ಮೇರೆಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ಆಸೆ, ಅಭಿಪ್ರಾಯ ಬದಿಗಿಟ್ಟು ನಿಂತಿದ್ದೇನೆ ಎಂದು ತಿಳಿಸಿದರು.
ನನಗೆ ಅರ್ಹತೆಗಿಂತ ಹೆಚ್ಚಿನ ಅಧಿಕಾರ ಈವರೆಗೂ ಸಿಕ್ಕಿದೆ. ಸಚಿವನಾಗಿರಬೇಕು ಎಂಬ ದೊಡ್ಡ ಆಸೆ ನನಗಿಲ್ಲ. ಕೇಂದ್ರದಲ್ಲಿ ಬೇರೆ ಅಧಿಕಾರ ಗಿಟ್ಟಿಸುವ ಆಸೆಯೂ ಇಲ್ಲ ಎಂದು ಹೇಳಿದರು.
ದೇವೇಗೌಡರನ್ನು ಈ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದೆವು. ಆದರೆ ಅವರು ತುಮಕೂರನ್ನು ಆಯ್ಕೆ ಮಾಡಿಕೊಂಡರು. ಎಐಸಿಸಿ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್ ಅವರೊಂದಿಗೆ ಮಾತನಾಡಿ ನನ್ನನ್ನು ಸ್ಪರ್ಧೆ ಮಾಡುವಂತೆ ಸೂಚಿಸಿದರು ಎಂದರು.
ಬೆಂಗಳೂರಿನ ಉತ್ತರದಲ್ಲಿ 10 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಯಾವ ಕೆಲಸವನ್ನೂ ಮಾಡಿಲ್ಲ. ಬೆಂಗಳೂರು ಕೇಂದ್ರ ಹಾಗೂ ಉತ್ತರ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.
ಇಂದಿನಿಂದಲೇ ಪ್ರಚಾರ ಆರಂಭಿಸುತ್ತೇನೆ. ಗೆದ್ದರೆ ಇಲ್ಲೇ ಇರುತ್ತೇನೆ. ಈಗಿನ ಸಂಸದರಂತೆ ದುರ್ಬೀನು ಹಾಕಿ ಹುಡುಕುವ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು. ಕೇಂದ್ರ ಸರ್ಕಾರದಿಂದ ಎಚ್.ಎಂ.ಟಿ, ಐಟಿಪಿಎಲ್ ನಂತರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಮುಚ್ಚುವ ಸ್ಥಿತಿ ಬಂದಿದೆ. ನನ್ನನ್ನು ಗೆಲ್ಲಿಸಿದರೆ ಅವುಗಳ ಪುನರುಜ್ಜೀವನಗೊಳಿಸಲಾಗುವುದು.
ಗೋಪಾಲಯ್ಯ ಮಾತನಾಡಿ, ಎರಡೂ ಪಕ್ಷಗಳಿಂದ ದೇವೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರು. ಆದರೆ ನಿನ್ನೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ ದೇವೇಗೌಡರು ಕೃಷ್ಣಭೆರೇಗೌಡರನ್ನೇ ಗೆಲ್ಲಿಸಬೇಕೆಂದು ಸೂಚನೆ ನೀಡಿದರು ಎಂದರು.
ಎರಡೂ ಪಕ್ಷಗಳ ಮುಖಂಡರನ್ನು ಬೆದರಿಸುವ ಯತ್ನವಾಗಿ ರಾಜ್ಯದಲ್ಲಿ ಮಾತ್ರ ಐಟಿ ರೇಡ್ ನಿನ್ನೆ ರಾತ್ರಿಯಿಂದ ನಡೆಯುತ್ತಿದೆ. ಏನೇ ಸಣ್ಣಪುಟ್ಟ ಸಮಸ್ಯೆ ಇದ್ದರೂ ಅದನ್ನೆಲ್ಲ ಮರೆತು ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ಮಾಡಬೇಕು. ಕೃಷ್ಣಭೆರೇಗೌಡರನ್ನು ಗೆಲ್ಲಿಸಬೇಕು. ನಾವು ಎಲ್ಲಾ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಯತ್ನಿಸುತ್ತಿದೆ ಎಂದರು.