ಕೇಂದ್ರದ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿ ಜನದ್ರೋಹಿ, ದೇಶದ್ರೋಹಿ, ಕೋಮುವಾದಿ ಭಾವನೆ ಕೆರಳಿಸಿ ಜನರನ್ನು ವಿಭಜಿಸುತ್ತಿದ್ದಾರೆ -ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು, ಮಾ.28-ದೇಶದ ಜನ ಮೋದಿ ಮತ್ತು ಸಂಘ ಪರಿವಾರದವರ ಸುಳ್ಳು ಭರವಸೆ ನಂಬಿ ಬಿಜೆಪಿಗೆ ಅಧಿಕಾರ ಕೊಟ್ಟರು. ಆದರೆ ಬಿಜೆಪಿ ಐದು ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿ ಜನದ್ರೋಹಿ, ದೇಶದ್ರೋಹಿ ಕೆಲಸ ಮಾಡಿ ಕೋಮುವಾದಿ ಭಾವನೆ ಕೆರಳಿಸಿ ಧರ್ಮಾಧಾರಿತವಾಗಿ ಜನರನ್ನು ವಿಭಜಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಉತ್ತರ ಕ್ಷೇತ್ರದ ಪ್ರಚಾರಪೂರ್ವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಜಂಟಿ ಸಭೆ ನಂತರ ಮಾತನಾಡಿದ ಅವರು, ನೋಟು ಅಮಾನೀಕರಣದಿಂದ ನಿರುದ್ಯೋಗ ಹೆಚ್ಚಾಗಿ ಆರ್ಥಿಕ ಅಭಿವೃದ್ಧಿ ಕುಂಠಿತವಾಗಿ ಶೇ.2ರಷ್ಟು ಜಿಡಿಪಿ ಕಡಿಮೆಯಾಗುತ್ತದೆ ಎಂದು ಮನ್‍ಮೋಹನ್ ಸಿಂಗ್ ಹೇಳಿದ್ದರು. ಅದು ನಿಜವಾಗಿದೆ ಎಂದರು.

ಬಿಜೆಪಿ ಸರ್ಕಾರ ಮೋದಿ ನಾಯಕತ್ವದಲ್ಲಿ 5 ವರ್ಷ ಆಡಳಿತ ನಡೆಸಿದೆ. ಈ ಐದು ವರ್ಷಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಬಡವರು, ದೀನದಲಿತರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರಿಗೆ ರಕ್ಷಣೆ ಇಲ್ಲದಂತಾಗಿದೆ. ನಕಲಿ ನೋಟು ನಿಲ್ಲಲಿಲ್ಲ. ಭ್ರಷ್ಟಾಚಾರ ಕಡಿಮೆಯಾಗಲಿಲ್ಲ, ಮೋದಿ ಹೇಳಿದ್ದು ಯಾವುದೇ ನಡೆಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಚ್ಚೆ ದಿನ್ ಅಮಿತ್ ಷಾ, ಅಂಬಾನಿ ಅಂತವರಿಗೆ ಬಂದಿದೆ. ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಗ್ಯಾಸ್ ಬೆಲೆ ದುಪ್ಪಟ್ಟಾಗಿದೆ. ಎರಡು ಕೋಟಿ ಉದ್ಯೋಗ ಎಲ್ಲಿ, 15 ಲಕ್ಷ ಹಣ ಹಾಕುತ್ತೇವೆ ಎಂದು ಹೇಳುತ್ತಿದ್ದರು. 15 ಪೈಸೆಯನ್ನೂ ಹಾಕಲಿಲ್ಲ ಎಂದು ಲೇವಡಿ ಮಾಡಿದರು.

ಹಾಸ್ಯ ಚಟಾಕಿ:
ಏ… ಎಲ್ರೂ ಕೂತ್ಕೊಳ್ರೋ, ಜೆಡಿಎಸ್ ಯಾಕೆ ಎದ್ದು ಹೊಗ್ತೀದ್ದೀರ ಕೂತ್ಕೊಳ್ಳಿ ಎಂದು ತಮ್ಮ ಭಾಷಣ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.

ಇಂದು ನಡೆದ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಪ್ರಚಾರ ಪೂರ್ವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಜಂಟಿ ಸಭೆಯಲ್ಲಿ ಮಾತನಾಡುವ ತಮ್ಮ ಸರದಿ ಬಂದಾಗ ಈ ರೀತಿ ಹೇಳುತ್ತಲೇ ಮಾತು ಆರಂಭಿಸಿದರು. ಕೆಲ ಕಾಲ ಸಭೆಯಲ್ಲಿ ನಗೆಯ ಅಲೆ ಎದ್ದಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ