ಬಿಜೆಪಿಯನ್ನು ಸೋಲಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ-ಮಾಜಿ ಪ್ರಧಾನಿ ದೇವೇಗೌಡ

Deve Gowda

ಬೆಂಗಳೂರು, ಮಾ.28-ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚಿಯೇ ನಾನು ಹೋಗುವುದು, ಇದರಲ್ಲಿ ಯಾವುದೇ ಮುಲಾಜಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರೀ ಗಂಡಾಂತರ ಕಾದಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಚ್ಚರಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಉತ್ತರ ಕ್ಷೇತ್ರದ ಪ್ರಚಾರಪೂರ್ವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಜಂಟಿ ಸಭೆ ನಂತರ ಮಾತನಾಡಿದ ಅವರು, ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ನನ್ನ ಶಕ್ತಿಯನ್ನು ಧಾರೆಯೆರೆಯುತ್ತೇನೆ. ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ರಾಜ್ಯದಲ್ಲಿ 25 ಸ್ಥಾನವನ್ನು ಮೈತ್ರಿಯಡಿ ಗೆಲ್ಲಲೇಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿದ್ದೇವೆ ಎಂದರು.

ನನ್ನ 50 ವರ್ಷದ ರಾಜಕೀಯ ಅನುಭವದಲ್ಲಿ ಹೇಳುತ್ತಿದ್ದೇನೆ. ಬಿಜೆಪಿಯನ್ನು ಸೋಲಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಧರ್ಮ ಪಾಲಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಮಹಾಘಟಬಂಧನ್‍ನಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಸ್ಥಳೀಯವಾಗಿ ಇವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮಹಾಘಟಬಂಧನ್‍ನಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಬೇಕು ಎಂದರು.

ನಾವೆಲ್ಲ ಒಟ್ಟಾಗಿ ಕೃಷ್ಣಭೆರೇಗೌಡ ಅವರ ಗೆಲುವಿಗೆ ಶ್ರಮಿಸುವ ನಿರ್ಣಯ ಕೈಗೊಂಡಿದ್ದೇವೆ ನಿನ್ನೆ ನಮ್ಮ ಪಕ್ಷದ ಕಚೇರಿಗೆ ಬಂದಿದ್ದ ಕೃಷ್ಣಭೆರೇಗೌಡ ಅವರೊಂದಿಗೆ ಮಾತನಾಡಿದ್ದೇನೆ. ಇಂದು ಜಂಟಿ ಸಭೆ ನಡೆಸಿದ್ದೇನೆ. ಮೈತ್ರಿ ಸರ್ಕಾರದಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿರಬಹುದು. ಅದನ್ನೆಲ್ಲ ಮರೆತು ಕೆಲಸ ಮಾಡಿ. ಮೈತ್ರಿ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಪಿಸುಮಾತಿನಲ್ಲಿ ಪರಸ್ಪರ ವಿರುದ್ಧವಾಗಿ ಮಾತನಾಡಿದರೂ ನಮ್ಮ ಪಕ್ಷದ ಮುಖಂಡರನ್ನು ಹೊರ ಹಾಕುತ್ತೇನೆ. ಐಕ್ಯತೆಗಾಗಿ ಹೋರಾಟ ಮಾಡಿ ಗೆಲ್ಲಬೇಕು ಎಂದು ಸೂಚಿಸಿದರು.

ಐದು ವರ್ಷದ ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವದಕ್ಕೆ ಧಕ್ಕೆಯಾಗುವಂತಹ ಘಟನೆ ನಡೆದಿವೆ. ಆದರೆ ನಮ್ಮ ಮೈತ್ರಿಯಲ್ಲಿ ಯಾವುದೇ ಸ್ವಾರ್ಥವಿಲ್ಲ.

37ಶಾಸಕರಿದ್ದ ಜೆಡಿಎಸ್‍ಗೆ ರಾಹುಲ್, ಸೋನಿಯಾಗಾಂಧಿಯವರು ಸಿಎಂ ಹುದ್ದೆ ಬಿಟ್ಟುಕೊಟ್ಟಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 27 ಪಕ್ಷಗಳ ನಾಯಕರು ಒಂದೇ ವೇದಿಕೆಗೆ ಬಂದು ಉತ್ತಮ ಸಂದೇಶ ನೀಡಿದ್ದಾರೆ.ನಂತರದ ವಿಧಾನಸಭೆ ಹಾಗೂ ಇತರೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಹೆಚ್ಚು ಗೆಲುವು ಸಾಧಿಸಿದೆ.ನಾವು ಮೈತ್ರಿ ಧರ್ಮ ಪಾಲಿಸುವ ಬಗ್ಗೆ ಯಾವ ಸಂಶಯವೂ ಬೇಡ ಎಂದರು.

ಮಾಧ್ಯಮಗಳ ಮೇಲೂ ಜವಾಬ್ದಾರಿ ಇದೆ.ಮೇ 23 ರಂದು ಕಾದು ನೋಡಿ ಈಗಿರುವುದಕ್ಕಿಂತಲೂ ಹೆಚ್ಚು ಸ್ಥಾನದಲ್ಲಿ ಗೆದ್ದು ತೋರಿಸುತ್ತೇವೆ. ಮಾಧ್ಯಮಗಳು ಏನಾದರೂ ವಿಶ್ಲೇಷಣೆ ಮಾಡಲಿ ಎಂದರು.

ನಕಲಿ ವಿಡಿಯೋ ಸೃಷ್ಟಿಸಿ ಅಪಪ್ರಚಾರ ಮಾಡಲಾಗಿತ್ತು.ಅದೇ ರೀತಿ ಗಣೇಶ ಹಾಲು ಕುಡಿದ ಎಂದು ಜನರನ್ನು ಯಮಾರಿಸಲಾಗಿತ್ತು.ಇಂತಹ ದಾರಿತಪ್ಪಿಸುವ ಅಪಪ್ರಚಾರವನ್ನು ಈಗಲೂ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಸತ್ಯ ತಿಳಿಸಿ ಸಾಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ