
ಬೆಂಗಳೂರು, ಮಾ.27-ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾವ ರಾಜಕೀಯ ಪಕ್ಷಗಳು ತಮ್ಮ ಸಮುದಾಯದ ಒಬ್ಬರಿಗೂ ಅವಕಾಶ ನೀಡದಿರುವುದನ್ನು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘ ತೀವ್ರವಾಗಿ ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ ಮಾತನಾಡಿ, ರಾಜ್ಯದಲ್ಲಿ 35ಲಕ್ಷ ಕ್ರೈಸ್ತ ಸಮುದಾಯದವರಿದ್ದು ನಮ್ಮ ಸಮುದಾಯದ ಕೊಡುಗೆಗಳನ್ನು ಗಮನದಲ್ಲಿಟ್ಟು ರಾಜಕೀಯ ಪಕ್ಷಗಳು ಮಂಗಳೂರು, ಬೆಂಗಳೂರು, ಕಾರವಾರ, ಬೀದರ್‍ಗಳಲ್ಲಿ ಸ್ಪರ್ಧಿಸಲು ಒಂದು ಅವಕಾಶ ನಿಡಬೇಕಿತ್ತು. ಆದರೆ ಎಲ್ಲ ಪಕ್ಷಗಳು ನಮ್ಮ ಸಮುದಾಯವನ್ನು ನಿರ್ಲಕ್ಷ್ಯ ಮಾಡಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಮುಂಬರುವ ರಾಜ್ಯಸಭಾ ಅಥವಾ ವಿಧಾನ ಪರಿಷತ್ ಸದಸ್ಯರನ್ನು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸುವುದರ ಮೂಲಕ ಆಗಿರುವ ಅನ್ಯಾಯವನ್ನು ಸರಿದೊಗಿಸಬೇಕು ಎಂದು ಒತ್ತಾಯಿಸಿದರು.
ಗುಡ್‍ಫ್ರೈಡೇ ಹಬ್ಬದ ಪ್ರಯುಕ್ತ ಚುನಾವಣಾ ದಿನಾಂಕಗಳನ್ನು ಮುಂದೂಡಲು ಮುಖ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದವು.ಅದನ್ನು ಪರಿಗಣಿಸಿ ಮನವಿಯ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಚುನಾವಣಾ ಅಧಿಕಾರಿಯವರಿಗೆ ನಿರ್ದೇಶನ ನೀಡಿದ್ದಾರೆ .ಆದ್ದರಿಂದ ನಮ್ಮ ಕ್ರೈಸ್ತ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದರು.