ಪಿಎನ್‍ಬಿ ಹಗರಣ-ಆರೋಪಿ ನೀರವ್ ಮೋದಿ ಕರೆತರಲು ಲಂಡನ್‍ಗೆ ಸಿಬಿಐ

ನವದೆಹಲಿ,ಮಾ.27- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ಲಂಡನ್‍ನಲ್ಲಿ ಆಶ್ರಯಪಡೆದಿರುವ ವಜ್ರ್ಯೋದ್ಯಮಿ ನೀರವ್ ಮೋದಿ ಅವರನ್ನು ಭಾರತಕ್ಕೆ ಕರೆತರಲು ಸಿಬಿಐ ಇಂದು ಲಂಡನ್‍ಗೆ ತೆರಳಲಿದೆ. ಇದರೊಂದಿಗೆ ಮಹಾವಂಚನಕ ಬಂಧನ ಸನಿಹಿತವಾಗಿದೆ.

ಇದೇ ವೇಳೆ ಬಂಧನ ಭೀತಿಯಿಂದ ನೀರವ್ ಮೋದಿ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಇದಕ್ಕೂ ಮುನ್ನವೇ ಸಿಬಿಐ ತಂಡ ಲಂಡನ್‍ಗೆ ತೆರಳಿ ನೀರವ್ ಮೋದಿ ಆರ್ಥಿಕ ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟ ಮಹತ್ವದ ದಾಖಲೆ ಪತ್ರಗಳು ಮತ್ತು ದಸ್ತವೇಜುಗಳನ್ನು ಸಲ್ಲಿಸಲಿದೆ.

ಜಂಟಿ ನಿರ್ದೇಶಕರ ಶ್ರೇಣಿಯ ನೇತೃತ್ವದ ಉನ್ನತಾಧಿಕಾರಿ ತಂಡ ಇಂದೇ ಲಂಡನ್‍ಗೆ ತೆರಳಲಿದ್ದು, ನೀರವ್‍ನನ್ನು ಭಾರತಕ್ಕೆ ಹಸ್ತಾಂತರ ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ತೀವ್ರಗೊಳಿಸಲಿದೆ.

ಭಾರತವು ಸಲ್ಲಿಸಲಿರುವ ದಾಖಲೆ ಪತ್ರಗಳನ್ನು ಪರಿಶೀಲಿಸಿ ಅದರಲ್ಲಿನ ಅಂಶಗಳು ಸಾಬೀತಾದ ನಂತರವಷ್ಟೇ ಲಂಡನ್ ಪೊಲೀಸರು ವಜ್ರೋದ್ಯಮಿಯನ್ನು ಬಂಧಿಸಲು ಸಾಧ್ಯ. ಅಲ್ಲಿಯ ತನಕ ನೀರವ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಅಲ್ಲಿನ ಪೊಲೀಸರು ಮತ್ತು ವಲಸೆ ವಿಭಾಗದ ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ.

ಇದೇ ವೇಳೆ ಬಂಧನ ಭೀತಿಗೆ ಒಳಗಾಗಿರುವ ಆರ್ಥಿಕ ಅಪರಾಧಿ ನೀರವ್ ಸ್ಥಳೀಯ ಖ್ಯಾತ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸಿ, ಕಾನೂನು ಸಮರಕ್ಕೆ ಮುಂದಾಗಿದ್ದಾನೆ.

ಮತ್ತೊಂದೆಡೆ ಅನಾರೋಗ್ಯದ ನೆಪವೊಡ್ಡಿ ಕಾನೂನು ಕುಣಿಕೆಯಿಂದ ಪಾರಾಗುವ ಕುತಂತ್ರವನ್ನು ಸಹ ಅನುಸರಿಸಲು ನೀರವ್ ಹವಣಿಸುತ್ತಿದ್ದಾನೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ.

ನೀರವ್ ಮೋದಿಗೆ ಜಾಮೀನು ನೀಡಿದ್ದೇ ಆದರೆ ಆತ ನ್ಯಾಯಾಲಯಕ್ಕೆ ಹಾಜರಾಗಲು ವಿಫಲನಾಗುತ್ತಾನೆ ಎಂಬ ಬಗ್ಗೆ ಗಮನಾರ್ಹ ಅಂಶಗಳಿವೆ ಎಂದು ಜಿಲ್ಲಾ ನ್ಯಾಯಾಧೀಶರಾದ ಮೇರಿ ಮೆಲೋನ್ ಜಾಮೀನು ನಿರಾಕರಿಸಿಮಾ.29ರವರೆಗೆ ನ್ಯಾಯಾಂಗ ಬಂಧನದಲ್ಲಿರುವಂತೆ ಆದೇಶಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ