ಸೇವಾ ಮತದಾರರು ಮತ ಹಾಕಲು ಆವಕಾಶ ಕಲ್ಪಿಸಿದ ಆಯೋಗ

ಬೆಂಗಳೂರು, ಮಾ.27-ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಭದ್ರತಾ ಸಿಬ್ಬಂದಿಗಳಿಗೆ ಫ್ರಾಕ್ಸಿ (ಪರವಾದ ಮತ ಚಲಾವಣೆ) ಮತ ಹಾಕಲು ಆಯೋಗ ಅವಕಾಶ ಕಲ್ಪಿಸಿದೆ.

ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಮಿಲಿಟರಿ, ಸಿಆರ್‍ಪಿಎಫ್, ರಾಜ್ಯ ಪೊಲೀಸ್ ದಳ ಹಾಗೂ ವಿದೇಶಾಂಗ ಸಚಿವಾಲಯದಲ್ಲಿಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗಳಿಗೆ ಮತ ಹಾಕಲು ಸಮಯಾವಕಾಶ ಸಿಗುತ್ತಿರಲಿಲ್ಲ. ಕಾನೂನಿನಲ್ಲಿ ಅವಕಾಶ ಇದ್ದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗದೆ ಇದ್ದುದರಿಂದ ಸೇವಾ ನಿರತರು ಮತದಾನದಿಂದ ವಂಚಿತರಾಗುತ್ತಿದ್ದರು. ಈ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಇಂದು ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದ್ದು, ಸೇವಾ ಮತದಾರರು ಯಾವ ರೀತಿ ತಮ್ಮ ಮತವನ್ನು ಚಲಾವಣೆ ಮಾಡಬಹುದು ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.

ಆಯೋಗದ ಹಿರಿಯ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕೆಲವು ಗೊಂದಲಗಳನ್ನು ಬಗೆಹರಿಸಿದರು.

ಸೇವಾ ಮತದಾರರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡವರಿಗೆ ಮತದಾನ ಮಾಡಲು ಅವಕಾಶ ಸಿಗುತ್ತದೆ. ಯಾವುದೇ ಮತಗಟ್ಟೆಯಲ್ಲಿದ್ದರೂ ನೊಂದಾಯಿತ ಮತದಾರರು ತಮ್ಮ ತವರು ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಲು ಅವಕಾಶವಿದೆ.ಸೇವಾ ಮತದಾರರ ಮತ ಚಲಾವಣೆ ವೇಳೆ ರೆಕಾರ್ಡ್ ಆಫೀಸರ್ ಅವರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಹೇಳಿದರು.

ಮತ್ತೊಂದು ಮಾರ್ಗದಲ್ಲಿ ಮತ ಚಲಾವಣೆಗೆ ಅವಕಾಶ ಇದೆ. ಸೇವಾ ನಿರತ ಸಿಬ್ಬಂದಿಗಳು ತಮ್ಮ ತಂದೆ, ತಾಯಿ, ಪತ್ನಿ ಅಥವಾ ಆಪ್ತರ ಹೆಸರಿಗೆ ಫ್ರಾಕ್ಸಿ ಮತದಾನದ ಹಕ್ಕು ಸ್ವಾಮ್ಯತೆಯ ಪತ್ರವನ್ನು ಕಳುಹಿಸಬೇಕು ಆ ಪತ್ರವನ್ನು ಆಧರಿಸಿ ಮತದಾನ ಮಾಡುವವರು ತಮ್ಮ ಗುರುತಿನ ನೋಟರಿ ಮಾಡಿಸಬೇಕು. ನಂತರ ಮತಗಟ್ಟೆಯಲ್ಲಿ ನೇರವಾಗಿ ಮತ ಚಲಾಯಿಸಬಹುದು ಎಂದು ಹೇಳಿದರು.

ಸೇವಾ ನಿರತ ಮತದಾರರ ಮತದಾನದ ಪ್ರಮಾಣ ಅತ್ಯಂತ ಕಡಿಮೆ ಇದೆ.2013ರ ವಿಧಾನಸಭೆ ಚುನಾವಣೆಯಲ್ಲಿ 36,726 ಮಂದಿ ನೋಂದಾಯಿತರಾಗಿದ್ದರು.

2014 ರ ಲೋಕಸಭೆಯ ಚುನಾವಣೆಯಲ್ಲಿ 40,729 ಮಂದಿ ನೋಂದಾಯಿತರಾಗಿದ್ದರು. ಈ ಎರಡೂ ಅವಧಿಯಲ್ಲೂ ಯಾರೂ ಮತ ಚಲಾವಣೆ ಮಾಡಿಲ್ಲ.

2018ರ ವಿಧಾನಸಭೆ ಚುನಾವಣೆಯಲ್ಲಿ 28,622 ಮಂದಿ ನೋಂದಾಯಿತರಾಗಿದ್ದು, 3060 ಮಂದಿ ಮಾತ್ರ ಮತದಾನ ಮಾಡಿದ್ದರು.ಇದು ಶೇಕಡವಾರು 10.7ರಷ್ಟು ಮಾತ್ರ ಆಗಿತ್ತು.ಸೇವಾ ಮತದಾರರು ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಮುಂಚಿತವಾಗಿಯೇ ನೋಂದಣಿ ಮಾಡಿಕೊಂಡು ಮತದಾನದ ಹಕ್ಕನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನ ಬಹಳ ಮಹತ್ವದ್ದಾಗಿದೆ ಎಂದು ಸಂಜೀವ್‍ಕುಮಾರ್ ಕರೆ ನೀಡಿದರು.

ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ 39,539 ಮಂದಿ ಈವರೆಗೂ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿಗೆ ಈಗಲೂ ಕಾಲಾವಕಾಶವಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರು ಫಾರಂ -2, ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಫಾರಂ-2ಎ ಹಾಗೂ ಭಾರತದ ಹೊರಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ಸರ್ಕಾರದ ನೌಕರರು ಫಾರಂ-3ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಅಂಚೆ ಪತ್ರದ ಮೂಲಕವೂ ಮತ ಚಲಾಯಿಸಲು ಅವಕಾಶ ಇದೆ. ಈವರೆಗಿನ ಅಂಕಿ ಅಂಶಗಳ ಪ್ರಕಾರ ಅಂಚೆ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಅವರು ಅಂಕಿಸಂಖ್ಯೆಗಳನ್ನು ವಿವರಿಸಿದರು.

ಸಿಆರ್‍ಪಿಎಫ್, ವಾಯುಸೇನೆ, ಭೂಸೇನೆ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಗಳು ಮತ್ತು ಹಿರಿಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಸಿಆರ್‍ಪಿಎಫ್‍ನ ಐಜಿ ಗಿರಿಪ್ರಸಾದ್ ಅವರು ಮಾತನಾಡಿ,32 ವರ್ಷಗಳ ಸೇವಾವಧಿಯಲ್ಲಿ ನಾನು ಈವರೆಗೂ ಮತದಾನ ಮಾಡಲು ಸಾಧ್ಯವಾಗಿಲ್ಲ. ಪ್ರತಿಬಾರಿಯೂ ಚುನಾವಣಾ ಕರ್ತವ್ಯದಲ್ಲಿ ಕ್ಷೇತ್ರದ ಹೊರಭಾಗದಲ್ಲೇ ಇರುತ್ತೇನೆ. ಚುನಾವಣಾ ಆಯೋಗ ಸೇವಾ ಮತದಾರರಿಗೆ ಒಳ್ಳೆಯ ಅವಕಾಶ ಕಲ್ಪಿಸಿದೆ. ಇದನ್ನು ಸದುಪಯೋಗಪಡಿಸಿಕೊಂಡು ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರಲ್ಲದೆ, ಸೇವಾ ನಿರತ ಮತದಾರರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ