ಬೆಂ.ದಕ್ಷಿಣದಿಂದ ತೇಜಸ್ವಿ ಸೂರ್ಯ, ಬೆಂ.ಗ್ರಾಮಾಂತರದಿಂದ ಅಶ್ವತ್ಥನಾರಾಯಣ್ ಕಣಕ್ಕೆ; ಅಚ್ಚರಿ ಮೂಡಿಸಿದ ಬಿಜೆಪಿ ನಡೆ

ಬೆಂಗಳೂರುಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರು ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಕುತೂಹಲಕ್ಕೆ ಸೋಮವಾರ ತಡರಾತ್ರಿ ತೆರೆ ಬಿದ್ದಿದೆ.  ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್​ ನೀಡುವ ಮೂಲಕ ಬಿಜೆಪಿ ಹೈಕಮಾಂಡ್​ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಅನಂತ್​ಕುಮಾರ್​ ಅವರ ಹೆಂಡತಿ ತೇಜಸ್ವಿನಿ ಅವರಿಗೆ ಟಿಕೆಟ್​ ಕೈ ತಪ್ಪಿದೆ. ಇನ್ನು, ಮಂಡ್ಯ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಅಶ್ವತ್ಥನಾರಾಯಣ್  ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿ ಕಣಕ್ಕೆ ಇಳಿಸಿದೆ.

ಬೆಂಗಳೂರಿನಲ್ಲಿ ಏ.18ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಹೀಗಿದ್ದರೂ, ಟಿಕೆಟ್​ ಯಾರಿಗೆ ಸಿಗಲಿದೆ ಎನ್ನುವ ವಿಚಾರದಲ್ಲಿ ಮೂಡಿದ್ದ ಗೊಂದಲ ಬಗೆಹರಿದಿರಲಿಲ್ಲ. ಕೊನೆಯ ಕ್ಷಣದಲ್ಲಿ ವಾಗ್ಮಿ ತೇಜಸ್ವಿ ಸೂರ್ಯ ಅವರಿಗೆ ದೊರೆತಿದೆ.

ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್​ ನೀಡುವಂತೆ ಒತ್ತಡ ಕೇಳಿ ಬಂದಿದ್ದರಿಂದ ಬೆಂಗಳೂರು ದಕ್ಷಿಣ ಗೊಂದಲದ ಗೂಡಾಗಿತ್ತು. ಈ ವಿಚಾರ ಈಗ ನಿಜವಾಗಿದೆ. ಕೊನೆಗೂ ಹೈಕಮಾಂಡ್​ ತೇಜಸ್ವಿ ಅವರಿಗೆ ಮಣೆ ಹಾಕಿದ್ದಾರೆ.

ಮೊದಲ ಪಟ್ಟಿಯಲ್ಲೇ ತೇಜಸ್ವಿನಿ ಅನಂತ್​ಕುಮಾರ್​ ಅವರಿಗೆ ಟಿಕೆಟ್​ ಸಿಗಲಿದೆ ಎನ್ನಲಾಗಿತ್ತು. ಆದರೆ, ಅವರಿಗೆ ಟಿಕೆಟ್​ ನೀಡಲಿಲ್ಲ. ಹಾಗಾಗಿ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನರೇಂದ್ರ ಮೋದಿ ಅವರು ಕಣಕ್ಕಿಳಿಯುತ್ತಾರೆಂಬ ಸುದ್ದಿ ನಿನ್ನೆಯವರೆಗೂ ದಟ್ಟವಾಗಿ ಹಬ್ಬಿತ್ತು. ಆದರೆ, ಬಿಜೆಪಿ ನಾಯಕರು ಇದನ್ನು ಅಲ್ಲಗಳೆದಿದ್ದರು.

ಮತ್ತೊಂದೆಡೆ ತೇಜಸ್ವಿನಿ ಅವರಿಗೆ ಟಿಕೆಟ್​ ಸಿಗಲೇಬೇಕು ಎಂದು ಅನಂತ್​ಕುಮಾರ್​ ಬೆಂಬಲಿಗರು ಒತ್ತಡ ಹೇರಿದ್ದರು. ಬೆಂಗಳೂರು ದಕ್ಷಿಣದಿಂದ ರವಿ ಸುಬ್ರಹ್ಮಣ್ಯ ಕೂಡ ಟಿಕೆಟ್​ ಆಕಾಂಕ್ಷಿ ಎನ್ನಲಾಗಿತ್ತು. ಸೋಮವಾರ ತೇಜಸ್ವಿನಿಗೆ ಟಿಕೆಟ್​ ಕೈತಪ್ಪಲಿದೆ ಎನ್ನುವ ವಿಚಾರ ಹರಿದಾಡಿದ ಬೆನ್ನಲ್ಲೇ ಅವರ ಹಿಂಬಾಲಕರು ಮನೆ ಮುಂದೆ ಸೇರಿದ್ದರು. ಗೋಬ್ಯಾಕ್​ ಸುಬ್ರಹ್ಮಣ್ಯ ಎನ್ನುವ ಘೋಷಣೆ ಕೂಗಿದ್ದರು. ಅಷ್ಟೇ ಅಲ್ಲ, ನಾಮಪತ್ರ ಸಲ್ಲಿಕೆ ಮಾಡಿದೆ. ಮುಂದೇನಾಗತ್ತೋ ಆಗಲಿ ಎಂದು ಅನಂತ್​ಕುಮಾರ್ ಬೆಂಬಲಿಗರು ತೇಜಸ್ವಿನಿ ಅವರಿಗೆ ಸೂಚಿಸಿದ್ದರು.

ಬರೋಬ್ಬರಿ 6 ಬಾರಿ ಅನಂತ್​ಕುಮಾರ್​ ಅವರು ಸಂಸದರಾಗಿ ಆಯ್ಕೆ ಆಗಿದ್ದರು. ಈಗ ಅವರ ಪತ್ನಿಗೆ ಟಿಕೆಟ್​ ನೀಡದೇ ಇರುವುದು, ಅನಂತ್​ಕುಮಾರ್​ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಲಿದೆಯೇ ಎನ್ನುವ ಅನುಮಾನ ಮೂಡಿದೆ.

ಟಿಕೆಟ್​ ಸಿಕ್ಕ ಬಗ್ಗೆ ಟ್ವೀಟ್​ ಮಾಡಿರುವ ತೇಜಸ್ವಿ, “ನನಗೆ ಇದನ್ನು ನಂಬಲೇ ಸಾಧ್ಯವಾಗುತ್ತಿಲ್ಲ. ಇಷ್ಟು ದೊಡ್ಡ ಪಕ್ಷವು 28 ವರ್ಷದ ಯುವಕನ ಮೇಲೆ ನಂಬಿಕೆ ಇಟ್ಟು ಬೆಂಗಳೂರು ದಕ್ಷಿಣದಿಂದ ಟಿಕೆಟ್​ ನೀಡಿದೆ. ಬಿಜೆಪಿಯಲ್ಲಿ, ನರೇಂದ್ರ ಮೋದಿಯ ಹೊಸ ಭಾರತದಲ್ಲಿ ಮಾತ್ರ ಇದು ಸಾಧ್ಯ,” ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ