ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರು ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಕುತೂಹಲಕ್ಕೆ ಸೋಮವಾರ ತಡರಾತ್ರಿ ತೆರೆ ಬಿದ್ದಿದೆ. ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಅನಂತ್ಕುಮಾರ್ ಅವರ ಹೆಂಡತಿ ತೇಜಸ್ವಿನಿ ಅವರಿಗೆ ಟಿಕೆಟ್ ಕೈ ತಪ್ಪಿದೆ. ಇನ್ನು, ಮಂಡ್ಯ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಅಶ್ವತ್ಥನಾರಾಯಣ್ ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿ ಕಣಕ್ಕೆ ಇಳಿಸಿದೆ.
ಬೆಂಗಳೂರಿನಲ್ಲಿ ಏ.18ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಹೀಗಿದ್ದರೂ, ಟಿಕೆಟ್ ಯಾರಿಗೆ ಸಿಗಲಿದೆ ಎನ್ನುವ ವಿಚಾರದಲ್ಲಿ ಮೂಡಿದ್ದ ಗೊಂದಲ ಬಗೆಹರಿದಿರಲಿಲ್ಲ. ಕೊನೆಯ ಕ್ಷಣದಲ್ಲಿ ವಾಗ್ಮಿ ತೇಜಸ್ವಿ ಸೂರ್ಯ ಅವರಿಗೆ ದೊರೆತಿದೆ.
ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡುವಂತೆ ಒತ್ತಡ ಕೇಳಿ ಬಂದಿದ್ದರಿಂದ ಬೆಂಗಳೂರು ದಕ್ಷಿಣ ಗೊಂದಲದ ಗೂಡಾಗಿತ್ತು. ಈ ವಿಚಾರ ಈಗ ನಿಜವಾಗಿದೆ. ಕೊನೆಗೂ ಹೈಕಮಾಂಡ್ ತೇಜಸ್ವಿ ಅವರಿಗೆ ಮಣೆ ಹಾಕಿದ್ದಾರೆ.
ಮೊದಲ ಪಟ್ಟಿಯಲ್ಲೇ ತೇಜಸ್ವಿನಿ ಅನಂತ್ಕುಮಾರ್ ಅವರಿಗೆ ಟಿಕೆಟ್ ಸಿಗಲಿದೆ ಎನ್ನಲಾಗಿತ್ತು. ಆದರೆ, ಅವರಿಗೆ ಟಿಕೆಟ್ ನೀಡಲಿಲ್ಲ. ಹಾಗಾಗಿ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನರೇಂದ್ರ ಮೋದಿ ಅವರು ಕಣಕ್ಕಿಳಿಯುತ್ತಾರೆಂಬ ಸುದ್ದಿ ನಿನ್ನೆಯವರೆಗೂ ದಟ್ಟವಾಗಿ ಹಬ್ಬಿತ್ತು. ಆದರೆ, ಬಿಜೆಪಿ ನಾಯಕರು ಇದನ್ನು ಅಲ್ಲಗಳೆದಿದ್ದರು.
ಮತ್ತೊಂದೆಡೆ ತೇಜಸ್ವಿನಿ ಅವರಿಗೆ ಟಿಕೆಟ್ ಸಿಗಲೇಬೇಕು ಎಂದು ಅನಂತ್ಕುಮಾರ್ ಬೆಂಬಲಿಗರು ಒತ್ತಡ ಹೇರಿದ್ದರು. ಬೆಂಗಳೂರು ದಕ್ಷಿಣದಿಂದ ರವಿ ಸುಬ್ರಹ್ಮಣ್ಯ ಕೂಡ ಟಿಕೆಟ್ ಆಕಾಂಕ್ಷಿ ಎನ್ನಲಾಗಿತ್ತು. ಸೋಮವಾರ ತೇಜಸ್ವಿನಿಗೆ ಟಿಕೆಟ್ ಕೈತಪ್ಪಲಿದೆ ಎನ್ನುವ ವಿಚಾರ ಹರಿದಾಡಿದ ಬೆನ್ನಲ್ಲೇ ಅವರ ಹಿಂಬಾಲಕರು ಮನೆ ಮುಂದೆ ಸೇರಿದ್ದರು. ಗೋಬ್ಯಾಕ್ ಸುಬ್ರಹ್ಮಣ್ಯ ಎನ್ನುವ ಘೋಷಣೆ ಕೂಗಿದ್ದರು. ಅಷ್ಟೇ ಅಲ್ಲ, ನಾಮಪತ್ರ ಸಲ್ಲಿಕೆ ಮಾಡಿದೆ. ಮುಂದೇನಾಗತ್ತೋ ಆಗಲಿ ಎಂದು ಅನಂತ್ಕುಮಾರ್ ಬೆಂಬಲಿಗರು ತೇಜಸ್ವಿನಿ ಅವರಿಗೆ ಸೂಚಿಸಿದ್ದರು.
ಬರೋಬ್ಬರಿ 6 ಬಾರಿ ಅನಂತ್ಕುಮಾರ್ ಅವರು ಸಂಸದರಾಗಿ ಆಯ್ಕೆ ಆಗಿದ್ದರು. ಈಗ ಅವರ ಪತ್ನಿಗೆ ಟಿಕೆಟ್ ನೀಡದೇ ಇರುವುದು, ಅನಂತ್ಕುಮಾರ್ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಲಿದೆಯೇ ಎನ್ನುವ ಅನುಮಾನ ಮೂಡಿದೆ.
ಟಿಕೆಟ್ ಸಿಕ್ಕ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ, “ನನಗೆ ಇದನ್ನು ನಂಬಲೇ ಸಾಧ್ಯವಾಗುತ್ತಿಲ್ಲ. ಇಷ್ಟು ದೊಡ್ಡ ಪಕ್ಷವು 28 ವರ್ಷದ ಯುವಕನ ಮೇಲೆ ನಂಬಿಕೆ ಇಟ್ಟು ಬೆಂಗಳೂರು ದಕ್ಷಿಣದಿಂದ ಟಿಕೆಟ್ ನೀಡಿದೆ. ಬಿಜೆಪಿಯಲ್ಲಿ, ನರೇಂದ್ರ ಮೋದಿಯ ಹೊಸ ಭಾರತದಲ್ಲಿ ಮಾತ್ರ ಇದು ಸಾಧ್ಯ,” ಎಂದಿದ್ದಾರೆ.