ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ನಂತರ ಇತ್ತೀಚೆಗಷ್ಟೇ ಎರಡೂ ಪಕ್ಷಗಳು ಲೋಕಸಭೆ ಸೀಟುಗಳನ್ನು ಹಂಚಿಕೆ ಮಾಡಿಕೊಂಡವು. ಕಾಂಗ್ರೆಸ್ಗೆ 20 ಕ್ಷೇತ್ರ ಮತ್ತು ಜೆಡಿಎಸ್ಗೆ 8 ಕ್ಷೇತ್ರಗಳು ಎಂದು ಎರಡೂ ಪಕ್ಷಗಳ ಮುಖಂಡರು ನಿರ್ಣಯಿಸಿದರು. ಆದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯ ಕೊರತೆಯಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಮತ್ತೊಂದು ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಡುವಂತಾಯ್ತು.
ಒಂದು ಕ್ಷೇತ್ರ ಹೆಚ್ಚುವರಿಯಾಗಿ ಸಿಕ್ಕ ಬೆನ್ನಲ್ಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್ ಶಾಸಕರು ಸಭೆ ನಡೆಸಿದರು.
ಸಿದ್ದರಾಮಯ್ಯ ಅವರ ನಿವಾಸದಲ್ಲಿ ಇವತ್ತು ನಡೆದ ಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಹೆಸರು ಅಂತಿಮವಾಗಿದೆ. ಕಾಂಗ್ರೆಸ್ನ ಎಲ್ಲಾ ಶಾಸಕರೂ ಕೃಷ್ಣ ಭೈರೇಗೌಡರ ಹೆಸರನ್ನೇ ಶಿಫಾರಸು ಮಾಡಿದ್ದು, ಚುನಾವಣೆಗೆ ನಿಲ್ಲುವಂತೆ ಮನವಿ ಮಾಡಿದರು. ಕೃಷ್ಣ ಭೈರೇಗೌಡರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿಲ್ಲ ಎಂದು ಹಿಂದೇಟು ಹಾಕಿದರೂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಭೆಯಲ್ಲಿ ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಡಿಕೆ ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಕೃಷ್ಣ ಬೈರೇಗೌಡರು ಉತ್ತರದಲ್ಲಿ ಅಭ್ಯರ್ಥಿಯಾಗುವುದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ನಾಳೆ ಬೈರೇಗೌಡರು ನಾಮಪತ್ರ ಸಲ್ಲಿಸಲಿದ್ದಾರೆ.
ಉತ್ತರ ಕ್ಷೇತ್ರಕ್ಕೆ ಬಿ.ಎಲ್. ಶಂಕರ್ ಅವರ ಹೆಸರೂ ಕೇಳಿ ಬರುತ್ತಿತ್ತು. ಆದರೆ ಸೋಮವಾರ ಎಮ್.ಆರ್. ಸೀತಾರಾಮ್ ಅವರ ಮಗ ರಕ್ಷಾ ರಾಮಯ್ಯ ಅವರೂ ಟಿಕೆಟ್ಗಾಗಿ ಯತ್ನ ಆರಂಭಿಸಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ರಕ್ಷಾ ರಾಮಯ್ಯ ಅಖಿಲ ಭಾರತ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಇನ್ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಯೂತ್ ಕಾಂಗ್ರೆಸ್ನಲ್ಲಿ ಉತ್ತಮವಾದ ಹೆಸರು ಗಳಿಸಿದ್ದಾರೆ. ಇದನ್ನೇ ಮಾನದಂಡವಾಗಿಸಿಕೊಂಡು ರಕ್ಷಾ ರಾಮಯ್ಯ ಅವರನ್ನು ಚುನಾವಣೆ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಯುವ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು.