ತುಮಕೂರನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟ ಕಾಂಗ್ರೇಸ್

ತುಮಕೂರು, ಮಾ.14- ಹಾಲಿ ಸಂಸದರಿರುವ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕೈ ಮುಖಂಡರು ಕೊನೆಗೂ ತೆನೆ ಹೊತ್ತ ಮಹಿಳೆಗೆ ಶರಣಾಗಿ ಮುದ್ದುಹನುಮೇಗೌಡ ಪ್ರತಿನಿಧಿಸುವ ತುಮಕೂರನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದಾರೆ.

ನಿನ್ನೆವರೆಗೂ ನಾನೇ ದೋಸ್ತಿ ಅಭ್ಯರ್ಥಿ ಎಂಬ ನಂಬಿಕೆಯಿಂದ ಚುನಾವಣಾ ರಣತಂತ್ರ ರೂಪಿಸುತ್ತಿದ್ದ ಮುದ್ದಹನುಮೇಗೌಡರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟ ಮಾಹಿತಿ ದೊರೆಯುತ್ತಿದ್ದಂತೆ ನಾಟ್ ರೀಚಬಲ್ ಆಗಿದ್ದಾರೆ.

ಅವರನ್ನು ಸಮಾಧಾನಪಡಿಸುವ ಉದ್ದೇಶದಿಂದ ಮುದ್ದಹನುಮೇ ಗೌಡರನ್ನು ಭೇಟಿಯಾಗಲು ಪ್ರಯತ್ನಿಸಿದ ಕೈ ಮುಖಂಡರ ಪ್ರಯತ್ನ ಇದುವರೆಗೂ ಯಶಸ್ವಿಯಾಗಿಲ್ಲ.

ಆದರೆ ತುಮಕೂರು ಜೆಡಿಎಸ್ ಪಾಲಾಗುತ್ತಿದ್ದಂತೆ ತೆನೆ ಹೊತ್ತ ಮಹಿಳೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಕಳೆ ಕಂಡು ಬರುತ್ತಿದೆ.

ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತುಮಕೂರನ್ನು ಜೆಡಿಎಸ್‍ಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದರು. ಆದರೆ ರಾಹುಲ್ ಗಾಂಧಿ ಮೂಲಕ ತುಮಕೂರನ್ನು ತಮ್ಮ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ದೇವೇಗೌಡರು ಯಶಸ್ವಿಯಾಗಿದ್ದಾರೆ.

ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟಿರುವುದು ಕಾಂಗ್ರೆಸ್‍ನಲ್ಲಿ ಅಸಮಾಧಾನ ಮೂಡಿಸಿರುವ ಬೆನ್ನಲ್ಲೇ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಪಕ್ಷದ ಧೋರಣೆ ವಿರುದ್ಧ ಸಿಡಿದೆದ್ದಿದ್ದು , ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಕ್ಷೇತ್ರ ಜೆಡಿಎಸ್ ಪಾಲಾಗುತ್ತಿದ್ದಂತೆ ಆ ಪಕ್ಷದ ಪ್ರಮುಖರಾದ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಮಾಜಿ ಶಾಸಕರಾದ ಸುರೇಶ್ ಬಾಬು, ರಮೇಶ್ ಬಾಬು ನಡುವೆ ತೀವ್ರ ಪೈಪೋಟಿ ಉಂಟಾಗಿದೆ.

ಸ್ವತಃ ದೇವೇಗೌಡರೇ ತುಮಕೂರಿನಿಂದ ಕಣಕ್ಕಿಳಿಯುತ್ತಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ದೊಡ್ಡ ಗೌಡರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ