ಸಚಿವ ಡಿ.ಸಿ.ತಮ್ಮಣ್ಣನವರ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ-ಸುಮಲತಾ ಅಂಬರೀಶ್

ಮಂಡ್ಯ, ಮಾ.14- ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಸುಮಲತಾ ಅಂಬರೀಶ್ ನಡುವೆ ಮತ್ತೊಮ್ಮೆ ಜಗಳ್ ಬಂದಿ ನಡೆದಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರನ್ನೇ ಜೆಡಿಎಸ್ ಅಭ್ಯರ್ಥಿಯನ್ನಾಗಿಸಲು ನಾನು ನಡೆಸಿದ ಸಂಧಾನ ವಿಫಲವಾಗಿದೆ ಎಂದು ಡಿ.ಸಿ.ತಮ್ಮಣ್ಣ ನೀಡಿರುವ ಹೇಳಿಕೆಗೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಲತಾ ಅವರು ಚುನಾವಣೆಗೆ ನಿಲ್ಲುವುದು ಶತ ಸಿದ್ಧ ಎಂದು ತೀರ್ಮಾನಿಸಿದ ಬೆನ್ನಲ್ಲೇ ನಾನು ಮಧು ಎಂಬುವರ ಮೂಲಕ ಸಂಧಾನ ನಡೆಸಲು ತೀರ್ಮಾನಿಸಿದ್ದೆ.

ನಮ್ಮ ಸಂಧಾನಕ್ಕೆ ಸುಮಲತಾ ಸಮ್ಮತಿ ವ್ಯಕ್ತಪಡಿಸಿದ್ದರೆ ಅವರನ್ನೇ ಜೆಡಿಎಸ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತಿದ್ದೆವು. ಆದರೆ ಸುಮಲತಾ ಅವರು ಸಂಧಾನಕ್ಕೆ ಬಾರದೆ ತಮ್ಮ ಮೊಂಡು ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದು ತಮ್ಮಣ್ಣ ಹೇಳಿಕೆ ನೀಡಿದ್ದರು.

ಸುಮಲತಾ ಅವರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ನನ್ನನ್ನೇ ಅಭ್ಯರ್ಥಿ ಮಾಡಿ ಎಂದು ಕೇಳಿದ್ದರೆ ಸಿಎಂ ಒಪ್ಪಿಕೊಳ್ಳುತ್ತಿದ್ದರು. ಆದರೆ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಸುಮಲತಾ ಒಪ್ಪಲಿಲ್ಲ. ಅವರಿಬ್ಬರ ನಡುವೆ ಏನು ಕಲಹವಿದೆಯೋ ನನಗೆ ಗೊತ್ತಿಲ್ಲ. ಹೀಗಾಗಿ ನಾನು ಎಚ್‍ಡಿಕೆ ಮೇಲೆ ಒತ್ತಡ ಹಾಕಲಿಲ್ಲ ಎಂದಿದ್ದರು ತಮ್ಮಣ್ಣ.

ತಮ್ಮಣ್ಣ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸುಮಲತಾ ಅಂಬರೀಶ್ ಅವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದ ತಮ್ಮಣ್ಣ ಅವರು ಇದೀಗ ಸಂಧಾನಕ್ಕೆ ಮುಂದಾಗಿದ್ದೆ ಎಂದು ಮತ್ತೊಂದು ಬಾಲಿಶ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ