ಮೊಮ್ಮಗನಿಗಾಗಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟ ಮಾಜಿ ಪ್ರಧಾನಿ ದೇವೇಗೌಡರು

ಹಾಸನ, ಮಾ.14- ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರು ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮೊಮ್ಮಗನಿಗಾಗಿ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಐದು ಬಾರಿ ಚುನಾಯಿತರಾಗಿದ್ದ ಗೌಡರು, ಈ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ ಎಂಬ ನಿರಾಸೆ ಜನರಲ್ಲಿ ಕಂಡುಬರುತ್ತಿದೆ.
ಸದಾ ರಾಜಕೀಯದ ಬಗ್ಗೆಯೇ ಚಿಂತಿಸುವ ಗೌಡರಿಗೆ ಕ್ಷೇತ್ರ ಬದಲಾವಣೆ ಕೂಡ ಹೊಸದಲ್ಲ. ಈ ಹಿಂದೆ ಗೌಡರು ತಮ್ಮ ವಿಧಾನಸಭೆ ಕ್ಷೇತ್ರವಾದ ಹೊಳೆನರಸೀಪುರವನ್ನು ತಮ್ಮ ಪುತ್ರರಾದ ಹೆಚ್.ಡಿ.ರೇವಣ್ಣ ಅವರಿಗೆ ಧಾರೆ ಎರೆದಿದ್ದರು. ಅದೇ ರೀತಿ ಈಗ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಹಾಸನ ಕ್ಷೇತ್ರವನ್ನು ಧಾರೆ ಎರೆದಿದ್ದಾರೆ.

ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ತಮ್ಮ ಎದುರಾಳಿಯಾದರೂ ಎದೆಗುಂದದೆ ಸ್ಪರ್ಧಿಸುವ ಗೌಡರು ತಮ್ಮ ಚಾಣಾಕ್ಷ ನೀತಿಯಿಂದ ರಾಜಕೀಯ ಮಾಡುತ್ತ ಬಂದಿರುವುದು ರಾಜ್ಯದ ಹಲವು ನಾಯಕರು ನಿಬ್ಬೆರಗಾಗುವಂತೆ ಮಾಡಿದೆ.

ದೇವೇಗೌಡರು ತಮ್ಮ ಕುಟುಂಬ ಸಮೇತ ಮನೆ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಮೊಮ್ಮಗನ ಅಧಿಕೃತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ನೂರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ತಮ್ಮ ಗ್ರಾಮಸ್ಥರ ಸಮ್ಮುಖದಲ್ಲಿ ಭಾವುಕರಾಗಿ ಕಂಬನಿಯನ್ನೂ ಮಿಡಿದಿದ್ದಾರೆ.

ಕ್ಷೇತ್ರದ ಜನತೆಯ ಋಣಭಾರ ತಮ್ಮ ಮೇಲಿದ್ದು, ಇದಕ್ಕೆ ತಾವು ಚಿರಋಣಿ; ಆದರೆ ಈ ಬಾರಿಯ ಹಾಸನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಮೊಮ್ಮಗನಿಗೆ ಅಶೀರ್ವದಿಸಿ ಎಂದು ಕೇಳಿಕೊಂಡಿರುವ ಗೌಡರು ಚುನಾವಣೆ ಕಣಕ್ಕೆ ಭಾವನಾತ್ಮಕ ವಿದಾಯ ಹೇಳಿದ್ದಾರೆ ಎನ್ನಬಹುದು.

ಗೌಡರ ರಾಜಕೀಯ ನಡೆ ಏನೇ ಇರಲಿ, ಅವರಿಗೆ ಅವರೇ ಸಾಟಿ. ಹಲವು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ರಾಜಕೀಯವನ್ನು ತಮ್ಮ ಉಸಿರಾಗಿಸಿಕೊಂಡಿರುವ ಗೌಡರು ರಾಜ್ಯ ರಾಜಕಾರಣಕ್ಕೆ ನೀಡಿರುವ ಕೊಡುಗೆ ಅಪಾರ. ಅದನ್ನು ಇಂದು ತಮ್ಮ ಕುಟುಂಬದ ಮೂರನೆ ತಲೆಮಾರಿಗೆ ಹಸ್ತಾಂತರಿಸಿರುವ ಗೌಡರ ನಡೆ ಎಷ್ಟರ ಮಟ್ಟಿಗೆ ಸಾಕಾರವಾಗಲಿದೆ ಎಂದು ಲೋಕಸಭಾ ಚುನಾವಣೆ ಮುಗಿಯುವವರೆಗೆ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ