ಬೆಂಗಳೂರು, ಮಾ.8- ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ನಮ್ಮೂರಿಗೆ ಬಂದು ಶಾಸಕ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದರು. ಈ ಬಗ್ಗೆ ಸ್ಪಷ್ಟೀಕರಣ ಕೇಳಲಾಗಿದೆ. ಎಲ್ಲವನ್ನೂ ಈಗಲೇ ಹೇಳಿದರೆ ತೀರ್ಪಿಗೆ ಯಾವುದೇ ಮೌಲ್ಯ ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾನೂನಿನ ಹಿರಿಯ ತಜ್ಞರ ಅಭಿಪ್ರಾಯ ಪಡೆದಿದ್ದೇನೆ. ನಾವು ತೆಗೆದುಕೊಳ್ಳುವ ನಿರ್ಧಾರ ಮೈಲಿಗಲ್ಲಾಗಬೇಕು. ಯಾವುದೇ ತೀರ್ಪು ಒಬ್ಬರ ಪರವಾಗಿ ಇರಬಾರದು. ರಾಜೀನಾಮೆ ನೀಡಲು ಅವರಿಗೆ ಯಾರೂ ಒತ್ತಡ ಹಾಕಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘನೆ ಕುರಿತಂತೆ ಇದೇ 12 ರಂದು ವಿಚಾರಣೆ ನಡೆಸಲಿದ್ದೇವೆ. ಅದಕ್ಕೂ ಮುಂಚೆ ರಾಜೀನಾಮೆ ಅಂಗೀಕಾರ ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು. ತಾವು ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬಿಜೆಪಿಯ ಆಪರೇಷನ್ ಕಮಲ ಸಂಬಂಧ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಶಾಸಕರ ಪುತ್ರರೊಂದಿಗೆ ಚರ್ಚಿಸಿದರೆನ್ನಲಾದ ಆಡಿಯೋ ಪ್ರಕರಣದಲ್ಲಿ ಸಾರ್ವಜನಿಕರಿಗೆ ಸಂದೇಹ ಬರಬಾರದು ಎಂಬ ಕಾರಣಕ್ಕೆ ಎಸ್‍ಐಟಿ ರಚನೆ ಸಂಬಂಧ ಶೀಘ್ರ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು.
ಸದನದಲ್ಲಿ ಈ ವಿಚಾರ ಚರ್ಚೆಯಾಗಿ ಎಸ್‍ಐಟಿ ರಚನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದರೆ 15 ದಿನಗಳಲ್ಲಿ ತನಿಖೆ ನಡೆಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅಲ್ಲದೆ, ಚುನಾವಣೆ ಸಮೀಪಿಸುತ್ತಿರುವುದರಿಂದ ತಡವಾಗಬಾರದು. ಹಾಗಾಗಿ ಸರ್ಕಾರವನ್ನು ನೆನಪಿಸುವ ಕಾರ್ಯ ಮಾಡುತ್ತೇವೆ ಎಂದು ವಿವರಿಸಿದರು.
ನಾಲ್ವರು ಶಾಸಕರ ಮೇಲೆ ವಿಪ್ ಉಲ್ಲಂಘನೆ ಆರೋಪದಲ್ಲಿ ಕಾನೂನು ಹೇಗೆ ಹೇಳುತ್ತದೋ, ಹಾಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನೇ ಹೇಳಿದರೂ ಅದು ಅವರ ಅಭಿಪ್ರಾಯವಾಗುತ್ತದೆ ಎಂದರು.
ಈ ನಾಲ್ಕೂ ಜನರಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದೇವೆ. ಅದಕ್ಕೆ ಅವರು ಸಮಜಾಯಿಷಿ ನೀಡುತ್ತಿದ್ದಾರೆ. ರಾಜೀನಾಮೆ ಸ್ವೀಕರಿಸುವುದು ಬೇರೆ, ಅಂಗೀಕರಿಸುವುದು ಬೇರೆ ಎಂದು ಹೇಳಿದರು.